ಸಮ್ಮಿಶ್ರ ಸರ್ಕಾರದಲ್ಲಿ ಮತ್ತೆ ರೇವಣ್ಣ ಶಾಕ್- ರಾತ್ರೋರಾತ್ರಿ 700 ಅಧಿಕಾರಿಗಳ ವರ್ಗ!

ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಮತ್ತೆ ಎಚ್.ಡಿ.ರೇವಣ್ಣ ಶಾಕ್ ನೀಡಿದ್ದು, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ನಡೆಗೆ ಅಧಿಕಾರಿಗಳು ಕಕ್ಕಾಬಿಕ್ಕಿಯಾಗಿದ್ದಾರೆ. ಲೋಕೋಪಯೋಗಿ ಅಧಿಕಾರಿಗಳು, ನೌಕರರಿಗೆ ರೇವಣ್ಣ ಶಾಕ್ ನೀಡಿದ್ದು, ಮಧ್ಯರಾತ್ರಿ 700 ಅಧಿಕಾರಿಗಳು, ನೌಕರರನ್ನು ಏಕಾಏಕಿ ವರ್ಗಾವಣೆ ಮಾಡಿದ್ದಾರೆ.

ಎಂಜಿನಿಯರ್ ಅಧಿಕಾರಿಗಳಿಂದ ಹಿಡಿದು ಪ್ರಥಮ ದರ್ಜೆ ಸಹಾಯಕರವರೆಗಿನ ನೌಕರರನ್ನು ವರ್ಗ ಮಾಡಲಾಗಿದೆ. ನೌಕರರನ್ನು ವರ್ಗಾವಣೆಗೊಳಿಸಿ ಶನಿವಾರ ಮಧ್ಯರಾತ್ರಿ ಆದೇಶ ಹೊರಡಿಸಿರುವುದಾಗಿ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದ್ದು, ಇದೀಗ ಸಚಿವರ ಆದೇಶ ಲೋಕೋಪಯೋಗಿ ಇಲಾಖೆಯಲ್ಲಿ ಭಾರೀ ಸಂಚಲನ ಮೂಡಿಸಿದೆ.

ರೇವಣ್ಣ ತಾವು ಸಚಿವರಾದ ನಂತರ ಲೋಕೋಪಯೋಗಿ ಇಲಾಖೆಯಲ್ಲಿ 270 ಕ್ಕೂ ಹೆಚ್ಚು ವರ್ಗಾವಣೆಯನ್ನು ಇತ್ತೀಚೆಗೆ ಮಾಡಲಾಗಿತ್ತು. ಲೋಕೋಪಯೋಗಿ ಇಲಾಖೆ ಒಂದರಲ್ಲೇ ವರ್ಗಾವಣೆ ಸಂಬಂಧ ಸುಮಾರು 500ಕ್ಕೂ ಹೆಚ್ಚು ಶಿಫಾರಸ್ಸು ಪತ್ರಗಳು ಬಂದಿದ್ದವು. ಅದರಲ್ಲಿ ಬಿಜೆಪಿ ಶಾಸಕರ ಶಿಫಾರಸ್ಸು ಎಷ್ಟು? ಜೆಡಿಎಸ್ ಶಾಸಕರ ಶಿಫಾರಸ್ಸು ಎಷ್ಟು? ಮತ್ತು ಕಾಂಗ್ರೆಸ್ ಶಾಸಕರ ಶಿಫಾರಸ್ಸು ಎಷ್ಟು? ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಲು ರೇವಣ್ಣ ಮುಂದಾಗಿದ್ದರು.

ಸೂಪರ್ ಸಿಎಂ ಅವರ ವಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಸೂಪರ್ ಸಿಎಂ ವರ್ಗಾವಣೆ ದಂಧೆ ಎಂದು ಆರೋಪ ಮಾಡಿತ್ತು. ಇದಕ್ಕೆ ತಿರುಗೇಟು ನೀಡಿದ್ದ ರೇವಣ್ಣ, ಒಂದು ವೇಳೆ ಮುಂದೆ ರಾಜಕೀಯ ಪ್ರೇರಿತ ಆರೋಪ ಮಾಡಿದರೆ ದಾಖಲೆ ಬಿಡುಗಡೆಗೆ ಮಾಡುವುದಾಗಿ ತಿಳಿಸಿದ್ದರು. ಅಷ್ಟೇ ಅಲ್ಲದೇ ವರ್ಗಾವಣೆ ದಂಧೆ ಅಂತ ಆರೋಪಿಸಿದರೂ ದಾಖಲೆಗಳನ್ನು ಬಿಡುಗಡೆ ಮಾಡುತ್ತೀನಿ. ಬಿಎಸ್‍ವೈ, ಈಶ್ವರಪ್ಪ ಸೇರಿದಂತೆ ಬಿಜೆಪಿಯ ಘಟಾನುಘಟಿಗಳ ಶಿಫಾರಸ್ಸು ಪತ್ರವು ಅದರಲ್ಲಿದೆ. ಶಿಫಾರಸ್ಸು ಮಾಡುತ್ತಾರೆ, ಟ್ರಾನ್ಸ್ ಫರ್ ಮಾಡಿಸುತ್ತಾರೆ. ಆರೋಪ ಮಾತ್ರ ನನ್ನ ಮೇಲೆ ಮಾಡುತ್ತಾರೆ. ಅವರಿಗೆ ದಾಖಲೆ ಕೊಡುತ್ತೀನಿ ಎಂದು ಹೇಳುವ ಮೂಲಕ ಬಿಜೆಪಿ ನಾಯಕರಿಗೆ ರೇವಣ್ಣ ತಿರುಗೇಟು ನೀಡಿದ್ದರು.

ಸಮ್ಮಿಶ್ರ ಸರ್ಕಾರದಲ್ಲಿ ಎಚ್.ಡಿ.ರೇವಣ್ಣ ಸೂಪರ್ ಸಿಎಂ ಅಧಿಕಾರ ಚಲಾಯಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಅವರು ಅಧಿಕಾರ ದುರುಪಯೋಗ ಮಾಡಿಕೊಂಡು ವರ್ಗಾವಣೆ ದಂಧೆಯನ್ನು ಮಾಡುತ್ತಿದ್ದಾರೆ ಎಂದು ಯಡಿಯೂರಪ್ಪ ಆರೋಪಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Comments

Leave a Reply

Your email address will not be published. Required fields are marked *