ಅಂತಾರಾಷ್ಟ್ರೀಯ ಟೆಕ್ವಾಂಡೋ ಸ್ಪರ್ಧೆ: ಪಾಣೆಮಂಗಳೂರಿನ‌ ಆಯಿಶಾ ಹಫೀಝ್‌ಗೆ ಚಿನ್ನ

ಮಂಗಳೂರು: ಗೋವಾದಲ್ಲಿ (Goa) ನಡೆದ ಅಂತರಾಷ್ಟ್ರೀಯ ಟೆಕ್ವಾಂಡೋ ಸ್ಪರ್ಧೆಯಲ್ಲಿ (Taekwondo Sports) ಬಂಟ್ವಾಳ (Bantwal) ತಾಲೂಕಿನ ಪಾಣೆಮಂಗಳೂರಿನ‌ 7 ವರ್ಷದ ಬಾಲಕಿ ಆಯಿಶಾ ಹಫೀಝ್‌ ಚಿನ್ನದ ಪದಕ ಪಡೆದಿದ್ದಾಳೆ.

ಬಾಲಕಿ ಆಯಿಶಾ ಅಕ್ಕರಂಗಡಿಯ ನಿವಾಸಿ ಹಫೀಝ್ ಅವರ ಪುತ್ರಿ, ಆಕೆ ಟೆಕ್ವಾಂಡೋ ಸ್ಪರ್ಧೆಯಲ್ಲಿ 7 ವರ್ಷ ವಯಸ್ಸಿನ ವಿಭಾಗದಲ್ಲಿ ಚಿನ್ನ ಗೆದ್ದು, ವಿಶಿಷ್ಟ ಸಾಧನೆ ಮೆರೆದಿದ್ದಾಳೆ. ಬಡ ಕುಟುಂಬದ ಹಿನ್ನೆಲೆ ಕಾರಣದಿಂದ ಈ ಹುಡುಗಿಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿಲ್ಲ. ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಆಯಿಶಾ ದೇಶದ ಕೀರ್ತಿ ಪತಾಕೆ ಹಾರಿಸಿದ್ದಾಳೆ. ಆದರೆ, ಸೂಕ್ತ ಬೆಂಬಲ ಸಿಗದಿರುವುದರಿಂದ ಆಕೆಯ ಸಾಧನೆ ತೆರೆಮರೆಗೆ ಸರಿಯುವ ಆತಂಕವಿದೆ. ಹೀಗಾಗಿ ಟೆಕ್ವಾಂಡೋ ವಿಶಿಷ್ಟ ಕ್ರೀಡೆಯಲ್ಲಿ ಚಿನ್ನದ ಸಾಧನೆ ಮಾಡಿದ ವಿದ್ಯಾರ್ಥಿನಿ ಆಯಿಶಾ ಹಫೀಝ್‌ಗೆ ಸಮಾಜದ ನೆರವು ಬೇಕಿದೆ ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

ಆಯಿಶಾ ತಂದೆ ಹಫೀಝ್‌ ವಿಕಲಚೇತನರಾಗಿದ್ದು, ಕುಟುಂಬದ ನಿರ್ವಹಣೆಗೆ ಸಂಕಷ್ಟ ಪಡುತ್ತಿದ್ದಾರೆ. ಇದರ ನಡುವೆ ತಮ್ಮ ಮಗಳ ಸಾಧನೆಗೆ ಇನ್ನಷ್ಟು ಶಕ್ತಿ ನೀಡಲು ಸಮಾಜದ ಸಹೃದಯರ ನೆರವಿಗಾಗಿ ಎದುರು ನೋಡುತ್ತಿದ್ದಾರೆ.