ಛತ್ತೀಸ್‍ಗಢದಲ್ಲಿ ಎನ್‍ಕೌಂಟರ್ – ಇಬ್ಬರು ಮಹಿಳೆಯರು ಸೇರಿ 9 ಮಂದಿ ನಕ್ಸಲರ ಹತ್ಯೆ

ರಾಯ್‍ಪುರ್: ಛತ್ತೀಸ್‍ಗಢದ (Chhattisgarh) ನಾರಾಯಣಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‍ಕೌಂಟರ್‌ನಲ್ಲಿ ಇಬ್ಬರು ಮಹಿಳೆಯರು ಸೇರಿ 9 ಮಾವೋವಾದಿಗಳು (Maoists) ಸಾವಿಗೀಡಾಗಿದ್ದಾರೆ.

ಜಿಲ್ಲಾ ರಿಸರ್ವ್ ಗಾರ್ಡ್ ಮತ್ತು ವಿಶೇಷ ಕಾರ್ಯಪಡೆ ಜಂಟಿ ಭದ್ರತಾ ಪಡೆಗಳು (Security Forces) ನಾರಾಯಣಪುರ ಮತ್ತು ಕಂಕೇರ್ ಗಡಿ ಪ್ರದೇಶದ ಅಬುಜ್‍ಮರ್‌ನಲ್ಲಿ ನಕ್ಸಲರ ವಿರುದ್ಧ ಇಂದು ಬೆಳಿಗ್ಗೆ 6 ಗಂಟೆಯಿಂದ ಕಾರ್ಯಾಚರಣೆ ನಡೆಸುತ್ತಿವೆ. ಟೆಕ್ಮೇಟಾ ಮತ್ತು ಕಾಕೂರ್ ಗ್ರಾಮದ ನಡುವಿನ ಅರಣ್ಯದಲ್ಲಿ ಭದ್ರತಾ ಪಡೆ ಮತ್ತು ಮಾವೋವಾದಿಗಳ ನಡುವೆ ಎನ್‍ಕೌಂಟರ್ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾವೋವಾದಿಗಳ ಶಿಬಿರದಿಂದ ಒಂದು ಎಕೆ 47 ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಸೇರಿದಂತೆ ದೈನಂದಿನ ಬಳಕೆಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ, ಛತ್ತೀಸ್‍ಗಢದ ಕಂಕೇರ್ ಜಿಲ್ಲೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಗಳು ಹಿರಿಯ ಮಾವೋವಾದಿ ನಾಯಕ ಶಂಕರ್ ರಾವ್ ಸೇರಿದಂತೆ 29 ಮಾವೋವಾದಿಗಳನ್ನು ಹತ್ಯೆ ಮಾಡಿತ್ತು.