ಅಮರಾವತಿ: ಮೀನುಗಾರರ 2 ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ 7 ಮಂದಿ ಗಾಯಗೊಂಡಿದ್ದು, 6 ದೋಣಿಗಳಿಗೆ ಬೆಂಕಿ ಹಚ್ಚಿ ಸುಟ್ಟಿದ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ.
ಬಂಗಾಳಕೊಲ್ಲಿಯ ನಿರ್ಬಂಧಿತ ಪ್ರದೇಶದಲ್ಲಿ ರಿಂಗ್ ನೆಟ್ ಬಳಕೆಗೆ ಸಂಬಂಧಿಸಿ ವಾದ ನಡೆದಿತ್ತು. ವಾದ ಮಿತಿ ಮೀರಿ ಪರಸ್ಪರ ಕಿತ್ತಾಟ ನಡೆದಿದೆ. ಜೊತೆಗೆ ಒಬ್ಬರ ದೋಣಿ ಮೇಲೆ ಇನ್ನೊಬ್ಬರು ದಾಳಿ ನಡೆಸಿದ್ದಾರೆ. ಇದರಿಂದಾಗಿ ಹಲವರು ದೋಣಿಯಿಂದ ಕೆಳಗೆ ಬಿದ್ದು ಗಾಯಗಳಾಗಿದೆ. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಪೊಲೀಸರು, ಮೀನುಗಾರರನ್ನು ಸಮಾಧಾನಪಡಿಸಿ ಹೆಚ್ಚಿನ ಅನಾಹುತಗಳನ್ನು ತಡೆದಿದ್ದಾರೆ.

ಈ ಹಿಂದೆಯೂ ಸಾಂಪ್ರದಾಯಿಕ ಬಲೆ ಬಳಸುವ ಮೀನುಗಾರರು ಮತ್ತು ರಿಂಗ್ ನೆಟ್‌ಗಳನ್ನು ಬಳಸುವವರ ನಡುವೆ ಗಲಾಟೆ ನಡೆದಿತ್ತು. ಕರಾವಳಿಯ 8 ಕಿಮೀ ವ್ಯಾಪ್ತಿಯಲ್ಲಿ ರಿಂಗ್ ನೆಟ್ ಮೀನುಗಾರಿಕೆಯನ್ನು ನಿಷೇಧಿಸಲಾಗಿದೆ. ಆದರೂ ಇದನ್ನು ಸರಿಯಾಗಿ ಪಾಲಿಸುತ್ತಿಲ್ಲ. ಈ ಬಗ್ಗೆ ಪೊಲೀಸ್ ಕಮಿಷನರ್ ಮನೀಶ್ ಕುಮಾರ್ ಸಿನ್ಹಾ ಮಾತನಾಡಿ, ಗಲಾಟೆ ನಡೆದ ವಾಸವಾನಿಪಾಲೆಂ ಮತ್ತು ಜಲಾರಿಪೇಟಾ ಪ್ರದೇಶಗಳಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹೆರಿಗೆಗಾಗಿ ಗರ್ಭಿಣಿಯನ್ನು ಮಂಚದ ಮೇಲೆ ಮಲಗಿಸಿ ಹೊತ್ತೊಯ್ದ ಗ್ರಾಮಸ್ಥರು!

ಸಾಂಪ್ರದಾಯಿಕ ಮೀನುಗಾರರು ಈ ಬಲೆಗಳ ಬಳಕೆಯನ್ನು ವಿರೋಧಿಸುತ್ತಾರೆ. ಏಕೆಂದರೆ ಅದು ಸುತ್ತಲಿರುವ ಎಲ್ಲಾ ಮೀನುಗಳನ್ನು ಸೆರೆಹಿಡಿಯುತ್ತದೆ. ಇದರಿಂದಾಗಿ ಸ್ಥಳೀಯ ಮೀನುಗಾರರಿಗೆ ನಷ್ಟವಾಗುತ್ತದೆ. ಇದರಿಂದಾಗಿ 2020ರ ಡಿಸೆಂಬರ್‌ನಲ್ಲಿ ಆಂಧ್ರಪ್ರದೇಶ ಸರ್ಕಾರವು ರಿಂಗ್ ನೆಟ್‌ಗಳನ್ನು ಬಳಸುವುದನ್ನು ನಿಷೇಧಿಸಿತ್ತು. ಇದನ್ನೂ ಓದಿ: ಆಸ್ತಿ ವಿವಾದಕ್ಕೆ 70ರ ತಂದೆಯ ಕತ್ತು ಸೀಳಿ ಹತ್ಯೆಗೈದ ಮಗ

Leave a Reply