ಮಹಾನಂದಾ ನದಿಯಲ್ಲಿ ದೋಣಿ ದುರಂತ- 7 ಮಂದಿ ಸಾವು, 28 ಮಂದಿ ರಕ್ಷಣೆ

ಕೋಲ್ಕತ್ತಾ (ಮಾಲ್ಡಾ): ಪಶ್ಚಿಮ ಬಂಗಾಳದಿಂದ ಬಿಹಾರಕ್ಕೆ ಪಯಣ ಬೆಳೆಸಿದ್ದ ದೋಣಿ ಕತಿಹಾರ್ ಪ್ರದೇಶದಲ್ಲಿರುವ ಮಹಾನಂದಾ ನದಿಯಲ್ಲಿ ಮುಳುಗಿದ್ದು, 7 ಮಂದಿ ಸಾವನ್ನಪ್ಪಿ, 30ಕ್ಕೂ ಅಧಿಕ ಜನ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ಗುರುವಾರ ರಾತ್ರಿ ಈ ದುರ್ಘಟನೆ ಸಂಭವಿಸಿದ್ದು, ದೋಣಿಯಲ್ಲಿದ್ದ ಪ್ರಯಾಣಿಕರು ಪಶ್ಚಿಮ ಬಂಗಾಳದ ಮಾಲ್ಡಾನಿಂದ ಬಿಹಾರದ ಕತಿಹಾರ್ ಪ್ರದೇಶಕ್ಕೆ ಪ್ರಯಾಣಿಸುತ್ತಿದ್ದರು. ಪಂಚಮಿ ಪ್ರಯುಕ್ತ ಮುಕುಂದಪುರ ಘಾಟ್ ಬಳಿ ಹರಿಯುವ ಮಹಾನಂದಾ ನದಿಯಲ್ಲಿ ದೋಣಿ ಸ್ಪರ್ಧೆ ಪ್ರತಿ ವರ್ಷ ನಡೆಸಲಾಗುತ್ತದೆ. ಆದ್ದರಿಂದ ಈ ಸ್ಪರ್ಧೆ ಮುಗಿಸಿ ಜನರು ಮನೆಗೆ ದೋಣಿಯಲ್ಲಿ ಹಿಂದಿರುತ್ತಿದ್ದಾಗ ಈ ದುರಂತ ನಡೆದಿದೆ. ಈ ದೋಣಿಯಲ್ಲಿ 70 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು, ಸಂಜೆ ಸುಮಾರು 6.30ಕ್ಕೆ ಈ ಅವಘಡ ನಡೆದಿದೆ. ಇಲ್ಲಿಯವರೆಗೂ 28 ಜನರನ್ನು ರಕ್ಷಿಸಲಾಗಿದ್ದು, ನಾಪತ್ತೆಯಾದವರ ಶೋಧ ಕಾರ್ಯ ಮುಂದುವರಿದಿದೆ. ಇದನ್ನೂ ಓದಿ:ಗೋದಾವರಿಯಲ್ಲಿ ಮುಳುಗಿದ ಬೋಟ್ – 13 ಮಂದಿ ಸಾವು, 40 ಜನ ನಾಪತ್ತೆ

ಸಾವನ್ನಪ್ಪಿದ 7 ಮಂದಿ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ದೋಣಿ ದುರಂತಕ್ಕೆ ನಿಖರ ಕಾರಣ ಹಾಗೂ ದುರಂತದಲ್ಲಿ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಎನ್ನುವ ಬಗ್ಗೆ ಅಧಿಕೃತ ಮಾಹಿತಿ ದೊರಕಿಲ್ಲ. ಆದರೆ ದೋಣಿಯಲ್ಲಿ ಹೆಚ್ಚಿನ ಪ್ರಯಾಣಿಕರು ಇದ್ದ ಕಾರಣಕ್ಕೆ ಸಾವು, ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಸ್ಥಳಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‍ಡಿಆರ್‍ಎಫ್) ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ.

ಕಳೆದ ತಿಂಗಳು ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಗೋದಾವರಿ ನದಿಯಲ್ಲಿ ಕೂಡ ಭೀಕರ ದೋಣಿ ದುರಂತ ಸಂಭವಿಸಿತ್ತು. ಆ ದುರಂತದಲ್ಲಿ ಕನಿಷ್ಠ 15 ಜನ ಸಾವನ್ನಪ್ಪಿದ್ದರು. ಅಲ್ಲದೆ ಅನೇಕರು ನಾಪತ್ತೆಯಾಗಿದ್ದರು. ಗಂಡಿ ಪೋಚಮ್ಮ ದೇವಾಲಯದ ದರ್ಶನ ಮುಗಿಸಿ ಪಾಪಿಕೊಂಡಲು ಪ್ರವಾಸಿ ತಾಣದತ್ತ ಪ್ರವಾಸಿಗರು ಬರುತ್ತಿದ್ದ ವೇಳೆ ಮಾರ್ಗ ಮಧ್ಯ ದೋಣಿ ಮುಗಿಚಿ ಪ್ರಯಾಣಿಕರನ್ನು ಬಲಿ ಪಡೆದಿತ್ತು.

Comments

Leave a Reply

Your email address will not be published. Required fields are marked *