7 ವರ್ಷದ ಬಳಿಕ ಕ್ರಿಕೆಟ್‍ಗೆ ಮರಳಿದ ಶ್ರೀಶಾಂತ್ 

ತಿರುವನಂತಪುರಂ: 7 ವರ್ಷದ ಬಳಿಕ ಕ್ರಿಕೆಟ್‍ಗೆ ಶ್ರೀಶಾಂತ್ ಮರಳಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟಿ-20 ಪಂದ್ಯಾವಳಿಗಾಗಿ ಕೇರಳ ರಾಜ್ಯ ಕ್ರಿಕೆಟ್ ಸಂಸ್ಥೆ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ತಿರುವನಂತಪುರ ಎಕ್ಸ್‌ಪ್ರೆಸ್‌ ಖ್ಯಾತಿಯ ಶ್ರೀಶಾಂತ್ ಸ್ಥಾನ ಪಡೆದುಕೊಂಡಿದ್ದಾರೆ.

ಶ್ರೀಶಾಂತ್ ಈ ವರ್ಷದ ಸೆಪ್ಟೆಂಬರ್‌ನಲ್ಲಿ  ಸ್ಪಾಟ್ ಫಿಕ್ಸಿಂಗ್ ಪ್ರಕರಣದಿಂದಾಗಿ ಏಳು ವರ್ಷಗಳ ನಿಷೇಧ ಮುಗಿಸಿ ಬಂದಿದ್ದರು. ಸ್ಥಾನ ಪಡೆದ ಬಳಿಕ ಕೇರಳ ರಾಜ್ಯ ತಂಡದ ಸಹ ಆಟಗಾರರು ಮತ್ತು ನಿರ್ವಾಹಕರೊಂದಿಗೆ ತಮ್ಮ ರಾಜ್ಯದ ಕ್ಯಾಪ್‍ನ್ನು ಸ್ವೀಕರಿಸುವ ವಿಡಿಯೋ ಒಂದನ್ನು ಶ್ರೀಶಾಂತ್ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ.

ವಿಡಿಯೋದ ಜೊತೆ ಒಂದು ಭಾವನಾತ್ಮಕ ಸಂದೇಶವನ್ನು ಬರೆದುಕೊಂಡಿರುವ ಶ್ರೀಶಾಂತ್ ಮುರಿದ ಬಿದ್ದ ಮನುಷ್ಯ ತನ್ನನ್ನು ತಾನೇ ಮರುನಿರ್ಮಾಣ ಮಾಡಿಕೊಳ್ಳುವ ಬಲದ ಮುಂದೆ ಉಳಿದೆಲ್ಲವು ಶೂನ್ಯ ಎಂದು ಟ್ವೀಟ್ ಮಾಡಿದ್ದಾರೆ.

ಮುಂದಿನ ತಿಂಗಳಿನಿಂದ ಆರಂಭಗೊಳ್ಳಲಿರುವ ಪಂದ್ಯಾವಳಿಯಲ್ಲಿ ಕೇರಳ ತಂಡವನ್ನು ಸಂಜು ಸ್ಯಾಮ್ಸನ್ ಮುನ್ನಡೆಸಲಿದ್ದಾರೆ ಎಂದು ಕೇರಳ ಕ್ರಿಕೆಟ್ ಅಸೋಸಿಯೇಷನ್‍ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಟೂರ್ನಿಗಾಗಿ ಉತ್ತರ ಪ್ರದೇಶಕ್ಕೆ ತೆರಳಲಿರುವ ಶ್ರೀಶಾಂತ್ ಅವರಿಗೆ ಭಾರತದ ಮಾಜಿ ಆಟಗಾರ ಸುರೇಶ್ ರೈನಾ ಆಲ್ ದಿ ಬೆಸ್ಟ್ ಗೆಳೆಯ ಶೀಘ್ರದಲ್ಲೇ ಭೇಟಿಯಾಗೋಣ ಎಂದು ಶುಭಹಾರೈಸಿದ್ದಾರೆ.

37ರ ಹರೆಯದ ಶ್ರೀಶಾಂತ್ ಕೊನೆಯ ಬಾರಿ 2011ರಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. 2013ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‍ನಲ್ಲೂ ಕಣಕ್ಕೆ ಇಳಿದಿದ್ದರು. ನಂತರ ಸ್ಪಾಟ್ ಫಿಕ್ಸಿಂಗ್‍ನಿಂದಾಗಿ ನಿಷೇಧಕ್ಕೆ ಗುರಿಯಾಗಿದ್ದ ಶ್ರೀಶಾಂತ್ ಮತ್ತೆ ಭಾರತ ತಂಡಕ್ಕೆ ಪುನಾರಾಗಮನದ ನಿರೀಕ್ಷೆಯಲ್ಲಿದ್ದಾರೆ. ಸಚಿನ್ ಬೇಬಿ, ಜಲಾಜ್ ಸಕ್ಸೇನಾ ಮತ್ತು ರಾಬಿನ್ ಉತ್ತಪ್ಪ ಕೂಡ ಕೇರಳ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *