7 ತಿಂಗ್ಳ ಗರ್ಭಿಣಿಯ ಮೇಲೆ 4 ಬಾರಿ ಗುಂಡು ಹಾರಿಸಿದ್ಳು- ಪತಿಯ 2ನೇ ಪತ್ನಿಯನ್ನು ಕೊಂದ ಫಸ್ಟ್ ಹೆಂಡ್ತಿ

ಲಕ್ನೋ: ಮಹಿಳೆಯೊಬ್ಬಳು ತನ್ನ ಪತಿಯ ಎರಡನೇ ಪತ್ನಿಯನ್ನು ಶೂಟ್ ಮಾಡಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಶಬಾನಾಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಶಬಾನಾ ಟ್ರಾನ್ಸ್ ಪೋರ್ಟರ್ ಮೊಹಮ್ಮದ್ ಜಾಕೀರ್ ನ ಮೊದಲ ಪತ್ನಿ. ಜಾಕೀರ್ ಕೆಲವು ವರ್ಷಗಳ ಹಿಂದೆ ಆಲಿಯಾಳನ್ನು ಮದುವೆಯಾಗಿದ್ದನು. ಇದೀಗ ಕೊಲೆಯಾದ ಮಹಿಳೆ ಏಳು ತಿಂಗಳ ಗರ್ಭಿಣಿಯಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಇಬ್ಬರು ಮಹಿಳೆಯರು ಆಗಾಗ ಫೋನ್‍ನಲ್ಲಿ ಜಗಳ ಮಾಡುತ್ತಿದ್ದರು. ಜಾಕೀರ್ ಇಬ್ಬರ ಹೆಂಡತಿಯರ ಜಗಳದಿಂದ ಬೇಸರಗೊಂಡಿದ್ದನು. ಈ ಘಟನೆಯ ನಂತರ ಪತಿ ಕಾಣೆಯಾಗಿದ್ದಾನೆ. ಅಪರಾಧ ನಡೆದ ಸ್ಥಳದಲ್ಲಿಯೇ ಆರೋಪಿ ಶಬಾನಾಳನ್ನು ಬಂಧಿಸಲಾಗಿದೆ. ಅಲ್ಲದೇ ಕೊಲೆ ಮಾಡಲು ಬಳಸಿದ್ದ 9 ಎಂಎಂ ಪಿಸ್ತೂಲ್ ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಪಾಠಕ್ ತಿಳಿಸಿದ್ದಾರೆ.

ಆಲಿಯಾಳ ಸಂಬಂಧಿ ಔಷಧಿ ತರಲು ಮೆಡಿಕಲ್ ಶಾಪ್‍ಗೆ ಹೋಗಿದ್ದಳು. ಆಗ ಆರೋಪಿ ಶಬಾನಾ ಇದ್ದಕ್ಕಿದ್ದಂತೆ ಆಲಿಯಾ ಮನೆಗೆ ಬಂದು ಆಕೆಯನ್ನ ಹೊರಗೆ ಕರೆದುಕೊಂಡು ಬಂದು ನೆಲಕ್ಕೆ ತಳ್ಳಿದ್ದಾಳೆ. ನಂತರ ಆಕೆಯ ಮೇಲೆ ನಾಲ್ಕು ಸುತ್ತು ಗುಂಡು ಹಾರಿಸಿದ್ದಾಳೆ. ಪರಿಣಾಮ ಆಲಿಯಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಶಬಾನಾ ಕೊಲೆ ಮಾಡಿದ ನಂತರ ತಪ್ಪಿಸಿಕೊಂಡು ಹೋಗುವ ಪ್ರಯತ್ನ ಮಾಡಿಲ್ಲ. ಆಲಿಯಾಳ ಮೃತದೇಹದ ಬಳಿಯೇ ತನ್ನ ಪಿಸ್ತೂಲ್‍ನನ್ನು ಹಿಡಿದುಕೊಂಡು ನಿಂತಿದ್ದಳು. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಆಕೆಯನ್ನು ಬಂಧಿಸಿದ್ದಾರೆ. ಸದ್ಯಕ್ಕೆ ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *