ಬೃಹತ್ ಆಂಜನೇಯ ಪ್ರತಿಷ್ಠಾಪನೆ ವಿವಾದ- ಬಿಜೆಪಿ ಮುಖಂಡ ಸೇರಿ 18 ಮಂದಿ ಮೇಲೆ ಎಫ್‍ಐಆರ್

ಬೆಂಗಳೂರು: ಅಂಜನೇಯನ ವಿಚಾರದಲ್ಲಿ ಭರ್ಜರಿ ರಾಜಕೀಯ ಶುರುವಾಗಿದೆ. ಬೃಹತ್ ಆಂಜನೆಯ ವಿಗ್ರಹ ಪ್ರತಿಷ್ಠಾಪನೆ ವಿವಾದ ಸಂಬಂಧ ಇದೀಗ ಬಿಜೆಪಿ ಮುಖಂಡ ಸೇರಿ 18 ಮಂದಿ ಮೇಲೆ ಎಫ್‍ಐಆರ್ ದಾಖಲಾಗಿದೆ.

ಬೃಹತ್ ರೂಪಿ ಆಂಜನೇಯನಿಗೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗುತ್ತಿದೆ. ಜಿಲ್ಲಾಡಳಿತ ವಿವಾದಿತ ಜಾಗದಲ್ಲಿ ಹನುಮನ ಪ್ರತಿಮೆ ಪ್ರತಿಷ್ಠಾಪಿಸಲಾಗುತ್ತಿದೆ ಎಂದು ಹೇಳಿದೆ. ಆದ್ದರಿಂದ ಸೋಮವಾರ ತಡರಾತ್ರಿ ಎಸಿ ಜಗದೀಶ್ ಎಂಬವರು ಡಿ.ಜಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಮುಖಂಡ ಪದ್ಮನಾಭರೆಡ್ಡಿ ಸೇರಿ 18 ಮಂದಿ ವಿರುದ್ಧ ದೂರು ದಾಖಲಿಸಿದ್ದಾರೆ.

ಜಿಲ್ಲಾಡಳಿತ ಸರ್ವೇ ನಂಬರ್ 153 ಕೆರೆ ಜಾಗವಾಗಿದ್ದು, ಇಲ್ಲಿ ಮೂರ್ತಿ ಪ್ರತಿಷ್ಠಾನೆಗೆ ಸಾಧ್ಯವಿಲ್ಲ. ಇದನ್ನು ಪ್ರಶ್ನಿಸಲು ಬಂದ ನನಗೆ ಬೆದರಿಕೆ ಹಾಕಿದ್ದಾರೆ ಅಂತ ಜಗದೀಶ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಹಿಂದೂಗಳನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಆರೋಪಿಸಲಾಗುತ್ತಿದೆ.

ಏನಿದು ವಿವಾದ?: ಬೆಂಗಳೂರಿನ ಎಚ್‍ಬಿಆರ್ ಬಡಾವಣೆಯ ಕಾಚರಕನಹಳ್ಳಿಯ ಕೋದಂಡರಾಮಸ್ವಾಮಿ ದೇಗುಲದ ಪ್ರಾಂಗಣದಲ್ಲಿ 62 ಅಡಿ ಎತ್ತರದ ಬೃಹತ್ ಆಂಜನೇಯ ವಿಗೃಹವನ್ನು ಪ್ರತಿಷ್ಠಾಪನೆ ಮಾಡಲು ನಿರ್ಧರಿಸಲಾಗಿದೆ. ಆದ್ರೆ ಮುಜರಾಯಿ ಇಲಾಖೆ ಹಾಗೂ ಶ್ರೀರಾಮ ದೇಗುಲದ ಟ್ರಸ್ಟಿಗಳ ಮಧ್ಯೆ ದೇಗುಲದ ಜಾಗಕ್ಕೆ ಸಂಬಂಧಪಟ್ಟ ವ್ಯಾಜ್ಯ ಕೋರ್ಟ್‍ನಲ್ಲಿ ಇರುವುದರಿಂದ ದೇಗುಲದ ಆವರಣದೊಳಗೆ ಆಂಜನೇಯ ವಿಗ್ರಹ ತರುವಂತಿಲ್ಲ ಎಂದು ತಹಶೀಲ್ದಾರ್ ಡಿಸಿ ತಡೆಯೊಡ್ಡಿದ್ದಾರೆ. ಆಗ ಭಕ್ತರು ಆಕ್ರೋಶಗೊಂಡು ದೇಗುಲದ ಆವರಣದಲ್ಲಿಯೇ ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದ್ದಾರೆ. ಸಚಿವ ಜಾರ್ಜ್ ಇದಕ್ಕೆಲ್ಲ ಕುಮ್ಮಕ್ಕು ನೀಡುತ್ತಿದ್ದಾರೆ ಅಂತಾ ಆರೋಪಿಸಿ ಜಾರ್ಜ್ ವಿರುದ್ಧ ಬ್ಯಾನರ್ ಹಿಡಿದು ರಸ್ತೆಗಿಳಿದು ಜನ ಪ್ರತಿಭಟಿಸಿದ್ದಾರೆ. ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸ್ ವಾಹನಕ್ಕೆ ಅಡ್ಡಲಾಗಿ ಕಲ್ಲು ಇಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಬಿಜೆಪಿಯ ಕೆಲ ನಾಯಕರು ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿ ಸಾಥ್ ನೀಡಿದ್ದಾರೆ. ಕೆಜೆ ಜಾರ್ಜ್ ಈ ವಿಚಾರದಲ್ಲಿ ಕುಮ್ಮಕ್ಕು ನೀಡುತ್ತಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ, ಮುಂದಿನ ಚುನಾವಣೆಯಲ್ಲಿ ಜನರೆ ಉತ್ತರ ಕೊಡಲಿದ್ದಾರೆ ಎಂದು ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಹೇಳಿದ್ದಾರೆ.

ರಸ್ತೆಯ ಡಿವೈಡರ್ ಅಡ್ಡ ಬಂದಿರೋದ್ರಿಂದ ಅದನ್ನು ನೆಲಸಮ ಮಾಡಲಾಗಿದೆ. ಎಷ್ಟೇ ಗಲಾಟೆಯಾದ್ರೂ ದೇವಾಲಯದ ಆವರಣದೊಳಗೆ ವಿಗ್ರಹ ಪ್ರವೇಶವಾಗುವಂತಿಲ್ಲ, ಪರ್ಯಾಯ ವ್ಯವಸ್ಥೆ ಏನ್ ಬೇಕಾದರೂ ಮಾಡಿಕೊಳ್ಳಲಿ ಎಂದು ಜಿಲ್ಲಾಧಿಕಾರಿ ದಯಾನಂದ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *