ಸ್ವಯಂಘೋಷಿತ ದೇವಮಾನವ ದಾತಿ ಮಹರಾಜ್ ಆಶ್ರಮದಿಂದ 600 ಹೆಣ್ಣು ಮಕ್ಕಳು ನಾಪತ್ತೆ!

ನವದೆಹಲಿ: ಅತ್ಯಾಚಾರ ಆರೋಪ ಎದುರಿಸುತ್ತಿರುವ ರಾಜಸ್ಥಾನ ಸ್ವಯಂಘೋಷಿತ ದೇವಮಾನವ ದಾತಿ ಮಹಾರಾಜ್ ಆಶ್ರಮದಿಂದ 600 ಹೆಣ್ಣು ಮಕ್ಕಳು ಕಾಣೆಯಾಗಿರುವ ಅಂಶ ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.

ಸದ್ಯ ರಾಜಸ್ಥಾನದ ಅಲವಾಸ್ ಪ್ರದೇಶದಲ್ಲಿರುವ ಆಶ್ರಮದಲ್ಲಿ 100 ಮಂದಿ ಹೆಣ್ಣು ಮಕ್ಕಳು ಮಾತ್ರ ಇದ್ದು, ಈ ಹಿಂದೆ ದಾತಿ ಮಹಾರಾಜ್ ತನ್ನ ಆಶ್ರಮದಲ್ಲಿ 700 ಮಂದಿ ಹೆಣ್ಣು ಮಕ್ಕಳಿರುವುದಾಗಿ ಹೇಳಿಕೆ ನೀಡಿದ್ದ. ಈ ಕುರಿತು ಪೊಲೀಸರು ತನಿಖೆ ನಡೆಸಿದ ವೇಳೆ ಬಾಲಕಿಯರು ನಾಪತ್ತೆ ಆಗಿರುವ ಕುರಿತ ಅಂಶ ಬೆಳಕಿಗೆ ಬಂದಿದೆ.

ಆಶ್ರಮದಲ್ಲಿರುವ ಬಾಲಕಿಯರು ಆಶ್ರಮದಿಂದ ಹೊರ ನಡೆದಿದ್ದರಾ ಅಥವಾ ತಮ್ಮ ಮನೆಗಳಿಗೆ ಹಿಂದಿರುಗಿದ್ದರಾ ಎನ್ನುವುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ. ಅಲ್ಲದೇ ಸದ್ಯ ದಾತಿ ಮಹಾರಾಜ್ ಸಹ ಆಶ್ರಮದಿಂದ ಕಾಣೆಯಾಗಿದ್ದು, ಕ್ರೈಂ ಬ್ರಾಂಚ್ ಪೊಲೀಸರು ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

ಏನಿದು ಪ್ರಕರಣ: ಸ್ವಯಂಘೋಷಿತ ದೇವಮಾನವ ದಾತಿ ಮಹಾರಾಜ್ ವಿರುದ್ಧ 25 ವರ್ಷದ ಯುವತಿಯೊಬ್ಬರು ಅತ್ಯಾಚಾರ ಆರೋಪ ಮಾಡಿ ದೂರು ದಾಖಲಿಸಿದ್ದರು. ದೂರಿನಲ್ಲಿ ತಮ್ಮ ಮೇಲೆ ದಾತಿ ಮಹಾರಾಜ್ ಹಾಗೂ ಆಶ್ರಮದ ಮತ್ತಿಬ್ಬರು ಸೇವಕರು ಸಹ ಅತ್ಯಾಚಾರ ನಡೆಸಿದ್ದಾಗಿ ಉಲ್ಲೇಖಿಸಿದ್ದರು.

ಅಂದಹಾಗೇ ದೆಹಲಿ ಹಾಗೂ ರಾಜಸ್ಥಾನ ಆಶ್ರಮದಲ್ಲಿ ಯುವತಿಯ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂಬ ಆರೋಪ ಮಾಡಿದ್ದು, ಬಳಿಕ ಯುವತಿ ಘಟನೆಯಿಂದ ಅಘಾತಕ್ಕೆ ಒಳಗಾಗಿ ಆಶ್ರಮ ತೊರೆದಿದ್ದರು. 2 ವರ್ಷದ ಬಳಿಕ ಘಟನೆಯಿಂದ ಚೇತರಿಸಿಕೊಂಡ ಯುವತಿ ಕೃತ್ಯದ ಕುರಿತು ತಮ್ಮ ಪೋಷಕರಿಗೆ ಮಾಹಿತಿ ನೀಡಿದ್ದರು. ಮಗಳ ಮೇಲೆ ನಡೆದ ಅವಮಾನಿಯ ಕೃತ್ಯದ ಕುರಿತು ಪೋಷಕರು ದೆಹಲಿ ಮಹಿಳಾ ಆಯೋಗದ ಸಹಕಾರ ಪಡೆದು ಪೊಲೀಸರಿಗೆ ದೂರು ನೀಡಿದ್ದರು.

ಈ ವೇಳೆ ತಮ್ಮ ವಿರುದ್ಧದ ಆರೋಪಗಳಿಗೆ ಪ್ರತಿಕ್ರಿಯಿಸಿದ್ದ ದಾತಿ ಮಹಾರಾಜ್ ದೂರು ನೀಡಿದ ಯುವತಿ ತನ್ನ ಮಗಳ ಸಮಾನ, ತನ್ನ ವಿರುದ್ಧ ತನಿಖೆಗೆ ಪೂರ್ಣ ಸಹಕಾರ ನೀಡುವುದಾಗಿ ಹೇಳಿದ್ದರು.

Comments

Leave a Reply

Your email address will not be published. Required fields are marked *