60 ದಿನಗಳ ಬಳಿಕ ಕೊಡಗಿನಲ್ಲಿ ಮತ್ತೆ ಪಾಸಿಟಿವ್ ಕೇಸ್- ಮುಂಬೈನಿಂದ ಬಂದಿದ್ದ ಮಹಿಳೆಗೆ ಕೊರೊನಾ

ಮಡಿಕೇರಿ: ಮುಂಬೈನಿಂದ ಕೊಡಗಿಗೆ ಬಂದಿದ್ದ 45 ವರ್ಷದ ಮಹಿಳೆಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದ್ದು, ಜಿಲ್ಲೆಯ ಜನರಿಗೆ ಯಾವುದೇ ಪ್ರಾಥಮಿಕ ಸಂಪರ್ಕ ಇಲ್ಲ ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾಹಿತಿ ನೀಡಿದ್ದಾರೆ.

ಮುಂಬೈನಲ್ಲಿ ಹೋಮ್ ನರ್ಸ್ ಆಗಿದ್ದ ರೋಗಿ ನಂ.1224 ಮೇ 14ರಂದು ಮುಂಬೈನಿಂದ ಬಸ್ಸಿನಲ್ಲಿ 14 ಜನರೊಂದಿಗೆ ಪ್ರಯಾಣಿಸಿದ್ದು, ಮೇ 15ರ ಸಂಜೆ ಮಂಗಳೂರಿಗೆ ಬಂದಿದ್ದರು. ಬಳಿಕ ಮಂಗಳೂರಿನ ಉರ್ವ ಪೊಲೀಸ್ ಠಾಣೆಗೆ ಹೋಗಿದ್ದ ಮಹಿಳೆ ಅಲ್ಲಿ ಮಾಹಿತಿ ನೀಡಿ, ಖಾಸಗಿ ಕಾರಿನ ಮೂಲಕ ರಾತ್ರಿ 9ಗಂಟೆಗೆ ಅಲ್ಲಿಂದ ಕೊಡಗಿನ ಚೆಕ್ ಪೋಸ್ಟ್ ಮೂಲಕ ಸಂಪಾಜೆಗೆ ಬಂದಿದ್ದರು. ಅಲ್ಲಿ ಆರೋಗ್ಯ ತಪಾಸಣೆಗೆ ಒಳಗಾಗಿದ್ದ ಮಹಿಳೆಯನ್ನು ನೇರವಾಗಿ ಮಡಿಕೇರಿಯಲ್ಲಿರುವ ಕೊಡಗು ಕೋವಿಡ್ ಆಸ್ಪತ್ರಗೆ ಅಂಬುಲೆನ್ಸ್ ಮೂಲಕ ಸಾಗಿಸಲಾಗಿತ್ತು. ಹೊರ ರಾಜ್ಯದಿಂದ ಬಂದ ಕಾರಣಕ್ಕೆ ಮಹಿಳೆಯ ಗಂಟಲ ದ್ರವ ಸಂಗ್ರಹಿಸಿ ಲ್ಯಾಬ್‍ಗೆ ಕಳುಹಿಸಲಾಗಿತ್ತು ಎಂದು ವಿವರಿಸಿದ್ದಾರೆ.

ಇದೀಗ ಮಹಿಳೆಯ ವರದಿ ಪಾಸಿಟಿವ್ ಎಂದು ಬಂದಿದ್ದು, ಸದ್ಯ ಮಹಿಳೆಗೆ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಂಪಾಜೆ ಚೆಕ್ ಪೋಸ್ಟ್ ನಲ್ಲಿ ಆರೋಗ್ಯ ತಪಾಸಣೆ ನಡೆಸಿದ ಸಿಬ್ಬಂದಿ ಒಬ್ಬರು ಮಾತ್ರ ಮಹಿಳೆಯ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದಾರೆ. ಉಳಿದಂತೆ ಯಾರೂ ಕೂಡ ಮಹಿಳೆಯ ಸಂಪರ್ಕಕ್ಕೆ ಬಂದಿಲ್ಲ. ಹೀಗಾಗಿ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ. ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಸಾಕಷ್ಟು ಜನರು ಬರುವ ನಿರೀಕ್ಷೆ ಇದ್ದು, ಪಾಸಿಟಿವ್ ವರದಿಗಳು ಬಂದಲ್ಲಿ ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ.

ಕೋವಿಡ್ ಆಸ್ಪತ್ರೆಯಲ್ಲಿ 220 ಬೆಡ್ ಗಳ ವ್ಯವಸ್ಥೆ ಇದ್ದು, 11 ವೆಂಟಿಲೇಟರ್ ಗಳಿವೆ. ಅವುಗಳ ಮೂಲಕ 120 ಜನರಿಗೆ ಏಕಕಾಲದಲ್ಲಿ ಆಕ್ಸಿಜನ್ ಪೂರೈಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದರು.

Comments

Leave a Reply

Your email address will not be published. Required fields are marked *