60 ಜನ ಇರೋ ಕುಟುಂಬದ ಸದಸ್ಯನಿಗೆ ಕೊರೊನಾ- ಆತಂಕದಲ್ಲಿ ಮನೆಮಂದಿ

– ಗ್ರಾಮಸ್ಥರಿಗೂ ಕೊರೊನಾ ಭಯ

ಧಾರವಾಡ: ಜಿಲ್ಲೆಯ ನವಲಗುಂದ ತಾಲೂಕಿನ ಶಿರಕೋಳ ಗ್ರಾಮಕ್ಕೂ ಕೊರೊನಾ ಪಾದಾರ್ಪಣೆ ಮಾಡಿದೆ. ಶಿರಕೋಳ ಗ್ರಾಮದ 60 ಜನ ಇರುವ ಅವಿಭಕ್ತ ಕುಟುಂಬದ ಸದಸ್ಯನೋರ್ವನಿಗೆ ಕೊರೊನಾ ಸೋಂಕು ತಗುಲಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿ ಮಾಡಿದೆ.

60 ಜನ ಇರುವ ಈ ಕುಟುಂಬಸ್ಥರು ಮನೆಯಲ್ಲಿ ಸದಸ್ಯನೊಬ್ಬನಿಗೆ ಸೋಂಕು ತಗುಲಿದ್ದು, ಇದೀಗ ಆ ಕುಟುಂಬದಲ್ಲಿರುವ ಎಲ್ಲ ಸದಸ್ಯರಿಗೂ ಕೊರೊನಾ ಆತಂಕ ಎದುರಾಗಿದೆ. ಅಲ್ಲದೆ ಇಡೀ ಗ್ರಾಮಸ್ಥರು ಕೂಡ ಆತಂಕ ಎದುರಿಸುವಂತಾಗಿದೆ. ಗ್ರಾಮದ 36 ವರ್ಷದ ಪುರುಷ(ಪಿ-12121)ನಿಗೆ ಕಳೆದ ಒಂದು ವಾರದಿಂದ ತೀವ್ರ ಜ್ವರ ಕಾಣಿಸಿಕೊಂಡಿತ್ತು. ಶೀತ, ಜ್ವರ ಇರಬಹುದು ಎಂದು ಈತ ಅದೇ ಗ್ರಾಮದ ಸ್ಥಳೀಯ ವೈದ್ಯರೊಬ್ಬರು ಚಿಕಿತ್ಸೆ ನೀಡಿದ್ದರು. ನಂತರ ಕೊರೊನಾ ಪರೀಕ್ಷೆ ಮಾಡಿದಾಗ ವ್ಯಕ್ತಿಗೆ ಕೊರೊನಾ ದೃಢಪಟ್ಟಿದೆ.

ಲಾಕ್‍ಡೌನ್ ಸಮಯದಲ್ಲಿ ಸೋಂಕಿತ ವ್ಯಕ್ತಿ ಕಿರಾಣಿ ಸಾಮಾನುಗಳನ್ನು ತರುವುದಕ್ಕೋಸ್ಕರ ಹುಬ್ಬಳ್ಳಿ, ಧಾರವಾಡ ಸುತ್ತಾಡಿದ್ದ. ಆಗ ಈತನಿಗೆ ಸೋಂಕು ತಗುಲಿರಬಹುದು ಎನ್ನಲಾಗುತ್ತಿದೆ. ಈ ಸೋಂಕಿತ ವ್ಯಕ್ತಿ ಕೆಲ ದಿನಗಳ ಹಿಂದೆಯಷ್ಟೇ ಗ್ರಾಮದ ತುಂಬ ಸುತ್ತಾಡಿದ್ದಾನೆ ಎಂದೂ ಹೇಳಲಾಗುತ್ತಿದ್ದು, ಇದರಿಂದ ಗ್ರಾಮಸ್ಥರು ಗಾಬರಿಗೊಂಡಿದ್ದಾರೆ. ಸದ್ಯ ಅವಿಭಕ್ತ ಕುಟುಂಬಕ್ಕೆ ಕೊರೊನಾ ಬಂದಿದ್ದರಿಂದ ಇಡಿ ಗ್ರಾಮವನ್ನ ಸಿಲ್‍ಡೌನ್ ಮಾಡಲಾಗಿದೆ.

Comments

Leave a Reply

Your email address will not be published. Required fields are marked *