6 ವರ್ಷದ ಬಾಲಕಿ ಮೇಲೆ ಅಪ್ರಾಪ್ತ ಸಹೋದರರಿಂದ ಗ್ಯಾಂಗ್ ರೇಪ್

ಲಕ್ನೋ: 6 ವರ್ಷದ ಬಾಲಕಿಯನ್ನು ಇಬ್ಬರು ಅಪ್ರಾಪ್ತ ವಯಸ್ಸಿನ ಸಹೋದರರು ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ನಡೆದಿದೆ.

ಬಾಲಕಿಯು 1ನೇ ತರಗತಿಯವಳಾಗಿದ್ದು, ಮಂಗಳವಾರ ಮಧ್ಯಾಹ್ನ ಆರೋಪಿ ಮನೆಯ ಬಳಿ ಆಡುತ್ತಿರುವಾಗ ಕಾಣಿಯಾಗಿದ್ದಳು. ಮಗಳು ಕಾಣದಿದ್ದಾಗ ಕುಟುಂಬಸ್ಥರು ಹುಡುಕಲು ಪ್ರಾರಂಭಿಸಿದ್ದಾರೆ. ಆದರೆ, ಎಷ್ಟು ಹುಡುಕಿದರೂ ಸಹ ಬಾಲಕಿ ಪತ್ತೆಯಾಗಿಲ್ಲ. ಆಗ ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸರಿಗೆ ದೂರು ನೀಡುತ್ತಿದ್ದಂತೆ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ. ಸಂಜೆಯಿಂದ ಬಾಲಕಿಯನ್ನು ಹುಡುಕಲು ಪ್ರಾರಂಭಿಸಿದ್ದಾರೆ. ರಾತ್ರಿಯಾದರೂ ಬಾಲಕಿ ಪತ್ತೆಯಾಗಿಲ್ಲ. ಬುಧವಾರ ಬೆಳಗ್ಗೆ ಆರೋಪಿಗಳ ತಾಯಿ ಪೊಲೀಸರ ಬಳಿ ಶರಣಾಗಿದ್ದು, ಮಕ್ಕಳು ಬಾಲಕಿಯ ಕತ್ತು ಹಿಸುಕಿ ಕೊಲೆ ಮಾಡಿದನ್ನು ಕಂಡು ಶವವನ್ನು ಎಸೆಯಲು ನಾನೇ ಸಹಾಯ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾಳೆ.

ಆರೋಪಿಗಳ ಮನೆಯಿಂದ ಸುಮಾರು 200 ಮೀ. ದೂರದಲ್ಲಿದ್ದ ಬಾಲಕಿಯ ದೇಹವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಆರೋಪಿ ಬಾಲಕರನ್ನು ವಿಚಾರಣೆ ನಡೆಸಿದ್ದು, ಕ್ಯಾಂಡಿ ಆಮೀಷ ಒಡ್ಡಿ ಬಾಲಕಿಯನ್ನು ಕರೆದುಕೊಂಡು ಹೋಗಲಾಗಿತ್ತು ಎಂದು ಒಪ್ಪಿಕೊಂಡಿರುವುದಾಗಿ ಫೋಲ್‍ಬೆಹದ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಶ್ಯಾಮ್ ನರಿಯನ್ ಸಿಂಗ್ ತಿಳಿಸಿದ್ದಾರೆ.

ಆರೋಪಿಗಳು 15 ಹಾಗೂ 12 ವರ್ಷದವರು, ದಲಿತ ಸಮುದಾಯಕ್ಕೆ ಸೇರಿದವರಾಗಿದ್ದು, ಶಾಲೆಯನ್ನು ಬಿಟ್ಟಿದ್ದಾರೆ. ಇವರ ತಂದೆ-ತಾಯಿ ಕಾರ್ಮಿಕರಾಗಿದ್ದು, ಬಾಲಕರು ಚಿಂದಿ ಆಯುವ ಕೆಲಸ ಮಾಡುತ್ತಿದ್ದರು. ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಇಬ್ಬರು ಸಹೋದರರು ಹಾಗೂ ತಾಯಿಯನ್ನು ಬಂಧಿಸಲಾಗಿದೆ. ಮೂವರ ವಿರುದ್ಧ ಪೋಕ್ಸೋ ಕಾಯ್ದೆಯ ಸೆಕ್ಷನ್ 302(ಕೊಲೆ) ಹಾಗೂ 201(ಸಾಕ್ಷ್ಯ ನಾಶ) ಅಡಿ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *