ಟಾಟಾ ಏಸ್ ಪಲ್ಟಿ- ಅಂತ್ಯಕ್ರಿಯೆಯಿಂದ ಮರಳುತ್ತಿದ್ದವರು ಮಸಣ ಸೇರಿದ್ರು!

ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕಂದಗನೂರು ಗ್ರಾಮದ ಬಳಿ ಟಾಟಾ ಏಸ್ ಪಲ್ಟಿಯಾಗಿದೆ. ಪರಿಣಾಮ ಸ್ಥಳದಲ್ಲಿಯೇ 6 ಮಂದಿ ಸಾವನ್ನಪ್ಪಿದ್ದು, ಸುಮಾರು 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಚಾಲಕನ ನಿಯಂತ್ರಣ ತಪ್ಪಿ ಟಾಟಾ ಏಸ್ ವಾಹನ ಪಲ್ಟಿಯಾಗಿದೆ. ಪರಿಣಾಮ ವಾಹನದಲ್ಲಿದ್ದ ಇಬ್ಬರು ಮಹಿಳೆಯರು, 4 ಮಂದಿ ಪುರುಷರು ಸೇರಿ 6 ಮಂದಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದರೆ ಒಬ್ಬರು ಆಸ್ಪತ್ರೆಗೆ ರವಾನಿಸುತ್ತಿದ್ದ ವೇಳೆ ಅಸುನೀಗಿದ್ದಾರೆ. ಅಲ್ಲದೆ ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೃತರು ಹಾಗೂ ಗಾಯಾಳುಗಳೆಲ್ಲರೂ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಹಳದೂರ ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದೆ.

ಸದ್ಯ ಗಾಯಾಳುಗಳಿಗೆ ಮುದ್ದೇಬಿಹಾಳ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಟಾಟಾ ಏಸ್‍ನಲ್ಲಿ ಸಂಬಂಧಿಕರೊಬ್ಬರ ಅಂತ್ಯಕ್ರಿಯೆ ಮುಗಿಸಿ ಗ್ರಾಮಕ್ಕೆ ಹಿಂದಿರುಗುತ್ತಿದ್ದ ವೇಳೆ ಅಪಘಾತ ನಡೆದಿದೆ. ಈ ಸಂಬಂಧ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತರ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

Comments

Leave a Reply

Your email address will not be published. Required fields are marked *