ಸಾಂದರ್ಭಿಕ ಚಿತ್ರ
ಗದಗ: ಟ್ರಾನ್ಸ್ ಫಾರ್ಮರ್ ನಲ್ಲಾದ ಶಾರ್ಟ್ ಸರ್ಕ್ಯೂಟ್‍ನಿಂದಾಗಿ ಸುಮಾರು 6 ಎಕರೆ ಕಬ್ಬಿನ ಗದ್ದೆ ಧಗಧಗಿಸಿ ಉರಿದು, ಬೆಂಕಿಗೆ ಆಹುತಿಯಾದ ಘಟನೆ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಸೂಡಿ ಗ್ರಾಮದಲ್ಲಿ ನಡೆದಿದೆ.
ಸೂಡಿ ಗ್ರಾಮದ ಶರಣಪ್ಪ ಮಾರನಸಬಸರಿ ಎಂಬ ರೈತನಿಗೆ ಸೇರಿದ್ದ ಕಬ್ಬಿನ ಜಮೀನು ಬೆಂಕಿಗೆ ಆಹುತಿಯಾಗಿದೆ. ಗುರುವಾರ ತಡರಾತ್ರಿ ಓವರ್ ಲೋಡ್ ವಿದ್ಯುತ್ ಪೂರೈಕೆಯಾದ ಹಿನ್ನೆಲೆಯಲ್ಲಿ ಟ್ರಾನ್ಸ್ ಫಾರ್ಮರ್ ಸುಟ್ಟು ಭಸ್ಮವಾಗಿದ್ದಲ್ಲದೇ ಅದರ ಕಿಡಿ ಪಕ್ಕದ ಕಬ್ಬಿನ ಜಮೀನಿಗೆ ಸಿಡಿದಿದೆ. ಕಟಾವಿಗೆ ಬಂದಿದ್ದ ಪೈರಿಗೆ ಬೆಂಕಿ ತಗುಲಿದ್ದರಿಂದ ಇಡೀ 6 ಎಕರೆ ಜಮೀನಲ್ಲಿದ್ದ ಕಬ್ಬು ಧಗಧಗಿಸಿ ಉರಿಯತೊಡಗಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ರೋಣ, ಗಜೇಂದ್ರಗಡ ಹಾಗೂ ಕುಷ್ಟಗಿ ತಾಲೂಕಿನ ಅಗ್ನಿಶಾಮಕದಳ ಸಿಬ್ಬಂದಿ ಮತ್ತು ಸ್ಥಳೀಯರು ಬೆಂಕಿಯನ್ನು ನಂದಿಸುವಲ್ಲಿ ಹರಸಾಹಸ ಪಟ್ಟಿದ್ದಾರೆ. ಅಲ್ಲದೇ ಕಬ್ಬು ಕಟಾವಿಗೆ ಬಂದಿದ್ದರಿಂದ ಬೆಂಕಿಯ ತೀವ್ರತೆ ಹೆಚ್ಚಾಗಿತ್ತು ಎನ್ನಲಾಗಿದೆ. ಘಟನೆ ಸಂಬಂಧ ಗಜೇಂದ್ರಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಸಾಲಸೂಲ ಮಾಡಿ ಬೆಳೆದಿದ್ದ ಕಬ್ಬಿನ ಬೆಳೆ ಕಣ್ಣಮುಂದೆಯೇ ಬೆಂಕಿಗೆ ಆಹುತಿಯಾದರೂ, ಏನೂ ಮಾಡಲಾಗದ ಪರಿಸ್ಥಿತಿಯಲ್ಲಿ ರೈತ ಶರಣಪ್ಪ ಕಂಗಾಲಾಗಿದ್ದಾನೆ. ಅಲ್ಲದೇ ಒಂದೆರಡು ವಾರದಲ್ಲಿ ಕಟಾವಿಗೆ ಸಿದ್ಧವಾಗಿದ್ದ ಕಬ್ಬಿನ ಬೆಳೆ, ಏಕಾಏಕಿ ಬೆಂಕಿಗೆ ಆಹುತಿಯಾಗಿ ಲಕ್ಷಾಂತರ ರೂಪಾಯಿ ನಷ್ಟ ಹೊಂದಿದ್ದಾನೆ. ಗಾಯದ ಮೇಲೆ ಬರೆ ಎಂಬಂತೆ ರೈತ ಶರಣಪ್ಪ ಕಣ್ಣಿರಿನಲ್ಲಿ ಕೈ ತೊಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply