ಹಾಸನ| ನಿಲ್ಲಿಸಿದ್ದ ಕಾರಿನ ಡೋರ್‌ ತೆಗೆದು 6.30 ಲಕ್ಷ ಹಣ ಎಗರಿಸಿದ ಕಳ್ಳ

ಹಾಸನ: ನಿಲ್ಲಿಸಿದ್ದ ಕಾರಿನ ಡೋರ್ ತೆಗೆದು ಕಾರಿನಲ್ಲಿಟ್ಟಿದ್ದ 6.30 ಲಕ್ಷ ರೂ. ಹಣ ಕದ್ದು ಕಳ್ಳ ಪರಾರಿಯಾಗಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ಪಟ್ಟಣದ ಸುಭಾಷ್‌ನಗರದಲ್ಲಿ ನಡೆದಿದೆ.

ಸುಭಾಷ್ ನಗರದಲ್ಲಿ ವಾಸವಿರುವ ತಮಿಳುನಾಡಿನ ಸುರೇಶ್ ಹಣ ಕಳೆದುಕೊಂಡಿದ್ದಾರೆ. ಇವರು ಒಂಬತ್ತು ವರ್ಷಗಳಿಂದ ಅರಸೀಕೆರೆ ಪಟ್ಟಣದ ಎಪಿಎಂಸಿಯಲ್ಲಿ ಕೊಬ್ಬರಿ ಅಂಗಡಿ ಇಟ್ಟುಕೊಂಡಿದ್ದಾರೆ.

ಅರಸೀಕೆರೆಯ ಫೆಡರಲ್ ಬ್ಯಾಂಕ್‌ನಿಂದ ಆರು ಲಕ್ಷ ನಗದು ಹಣ ಡ್ರಾ ಮಾಡಿಕೊಂಡು ಬಂದಿದ್ದರು. ಇದರ ಜೊತೆಗೆ ತಮ್ಮ ಬಳಿ ಇದ್ದ 30 ಸಾವಿರ ಸೇರಿಸಿ ಒಟ್ಟು 6.30 ಲಕ್ಷ ರೂ. ಹಣವನ್ನು ತಮ್ಮ KA-18-M-8952 ನಂಬರ್‌ನ ಕಾರಿನಲ್ಲಿಟ್ಟಿದ್ದರು.

ಎಪಿಎಂಸಿಯಲ್ಲಿರುವ ತಮ್ಮ ಅಂಗಡಿ ಮುಂಭಾಗ ಹಣದ ಸಮೇತ ಕಾರು ನಿಲ್ಲಿಸಿದ್ದರು. ಕಾರು ಲಾಕ್ ಮಾಡದೇ ಅಂಗಡಿಯೊಳಗೆ ಹೋಗಿದ್ದರು. ವಾಪಸ್ ಬಂದು ನೋಡಿದಾಗ ಹಣ ಕಳುವಾಗಿದೆ. ಸಿಸಿಟಿವಿ ಪರಿಶೀಲಿಸಿದಾಗ ಹಣ ಕಳುವಾಗಿರುವುದು ಬೆಳಕಿಗೆ ಬಂದಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರಸೀಕೆರೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.