6 ತಿಂಗಳಲ್ಲಿ ರೈತರಿಗೆ ಹೇಗೆ ಒಳ್ಳೆದಾಗುತ್ತೆ ನೋಡಿ – ವಿರೋಧಿಗಳಿಗೆ ಸಿಎಂ ಸವಾಲು

– ರೈತ ಈಗ ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು
– ಮಧ್ಯವರ್ತಿಗಳ ಹಾವಳಿ ಕೈತಪ್ಪಲಿದೆ
– ಎಪಿಎಂಸಿಯಲ್ಲೂ ರೈತರು ಮಾರಾಟ ಮಾಡಬಹುದು

ಬೆಂಗಳೂರು: ಆರು ತಿಂಗಳಲ್ಲಿ ರೈತರಿಗೆ ಯಾವ ರೀತಿ ಒಳ್ಳೆಯದು ಆಗುತ್ತದೆ ಎಂಬುದನ್ನು ನೋಡಿ ಎಂದು ಸಿಎಂ ಯಡಿಯೂರಪ್ಪ ಮಸೂಧೆ ವಿರೋಧಿಸಿ ಪ್ರತಿಭಟನೆ ನಡೆಸಿದವರಿಗೆ ಸವಾಲು ಎಸೆದಿದ್ದಾರೆ.

ರೈತ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು ಕರೆ ನೀಡಿದ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದೊಂದು ಐತಿಹಾಸಿಕ ನಿರ್ಣಯವಾಗಿದ್ದು. ಎಪಿಎಂಸಿಯ ಬಾಗಿಲು ಮುಚ್ಚಿಲ್ಲ. ರೈತರು ಈಗ ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. 6 ತಿಂಗಳ ಕಾದು ನೋಡಿ. ರೈತರಿಗೆ ಇದರಿಂದ ಎಷ್ಟು ಅನುಕೂಲವಾಗಲಿದೆ ಎಂಬುದು ಗೊತ್ತಾಗುತ್ತದೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಬಂದ್ ಎಫೆಕ್ಟ್ – ಗ್ರಾಹಕರಿಗಾಗಿ ಕಾದು ಸುಸ್ತಾಗಿ ನಿದ್ರೆಗೆ ಜಾರಿದ ವ್ಯಾಪಾರಸ್ಥರು

ನಾನು ರೈತನ ಮಗ, ಅನ್ನ ಕೊಡುವ ರೈತನಿಗೆ ಅನ್ಯಾಯವಾಗಲು ನಾನು ಬಿಡುವುದಿಲ್ಲ. ಅಧಿಕಾರಕ್ಕೆ ಅಂಟಿಕೊಂಡು ಕೂರುವವನು ಅಲ್ಲ. ವಿಧಾನಸಭೆಯಲ್ಲಿ ಚರ್ಚೆ ಮಾಡಲಾಗಿದೆ. ನನ್ನ ಬೆಳೆ, ನನ್ನ ಹಕ್ಕು. ರೈತ ಈಗ ತಾನು ಬೆಳೆಯುವ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅನಾವಶ್ಯಕವಾಗಿ ಬೇರೆ ರೈತರನ್ನು ಗೊಂದಲ ಮಾಡಬೇಡಿ ಎಂದು ರೈತರ ಜೊತೆ ಮನವಿ ಮಾಡುತ್ತೇನೆ. ನಾನು ನಿಮ್ಮ ಜೊತೆ ಇದ್ದೇನೆ. ನಿಮ್ಮ ಹಿತಕ್ಕೆ ಧಕ್ಕೆ ಆಗುವ ಕೆಲಸ ಈ ಯಡಿಯೂರಪ್ಪ ಮಾಡುವುದಿಲ್ಲ ಎಂದು ಹೇಳಿದರು. ಎಪಿಎಂಸಿ ಪೂರ್ಣ ಬಾಗಿಲು ಮುಚ್ಚಿಲ್ಲ. ಎಪಿಎಂಸಿಯಲ್ಲೂ ರೈತರು ಮಾರಾಟ ಮಾಡಬಹುದು. ಈ ಕಾಯ್ದೆಯಿಂದ ಮಧ್ಯವರ್ತಿಗಳ ಹಾವಳಿ ತಪ್ಪಿಸಬಹುದು ಎಂದು ಸಮರ್ಥಿಸಿಕೊಂಡರು.

ಕಾಯ್ದೆಯಿಂದ ಶೇ.70ರಿಂದ 80ರಷ್ಟು ಅನುಕೂಲ ಆಗಲಿದೆ. ನಾನು ಶೀಘ್ರದಲ್ಲೇ ರಾಜ್ಯ ಪ್ರವಾಸ ಮಾಡುತ್ತೇನೆ. ಆಗ ರೈತರು ಎಷ್ಟು ಮೆಚ್ಚುಗೆ ವ್ಯಕ್ತಪಡಿಸ್ತಾರೆ ಎಂಬುದು ಗೊತ್ತಾಗುತ್ತದೆ. ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿಯೇ ಈ ಕಾಯ್ದೆ ತರಲಾಗಿದೆ ಎಂದರು.

ಕಾಂಗ್ರೆಸ್ ನಾಯಕರ ಕಥೆ ಏನು ಅಂತಾ ಗೊತ್ತಿದೆ. ಈ ಹಿಂದೆ ಕಾಂಗ್ರೆಸ್‍ನವರು ಕಾಯ್ದೆ ಜಾರಿ ಬಗ್ಗೆ ಏನೆಲ್ಲಾ ಮಾಡಿದ್ದರು ಎಂಬುದು ಗೊತ್ತಿದೆ. ಹಿಂದೆ ಇದನ್ನು ಜಾರಿ ಮಾಡಲು ಕಾಂಗ್ರೆಸ್ ಮುಂದಾಗಿದ್ದರು. ಈಗ ಅದನ್ನು ಪ್ರಾಮಾಣೀಕವಾಗಿ ಜಾರಿ ಮಾಡಲು ಮುಂದಾಗಿದ್ದೇವೆ. ಈ ಕಾಯ್ದೆಯಿಂದ ಎಲ್ಲಾ ವರ್ಗದ ಜನರಿಗೆ ಅನುಕೂಲ ಆಗಲಿದೆ ಎಂದು ಸಮರ್ಥಿಸಿಕೊಂಡರು.

Comments

Leave a Reply

Your email address will not be published. Required fields are marked *