ಬೆಂಗ್ಳೂರಿನಲ್ಲಿ ಬರೋಬ್ಬರಿ 5.78 ಕೆಜಿ ತೂಕದ ಮಗು ಜನನ

ಬೆಂಗಳೂರು: ಸಿಲಿಕಾನ್ ಸಿಟಿಯ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಸ್ಪೆಷಲ್ ಮಗು ಡೆಲಿವರಿ ಆಗಿದೆ. ಈ ಮಗುವಿನ ತೂಕ ಭರ್ತಿ 5.78 ಕೆಜಿ ಇದ್ದು, ಬಲಭೀಮನನ್ನು ನೋಡಲು ಜನರು ಮುಗಿಬಿದ್ದಿದ್ದಾರೆ.

ವೈದ್ಯಲೋಕಕ್ಕೆ ಸವಾಲಾಗಿದ್ದ ಈ ಕಂದಮ್ಮ ಪಶ್ಚಿಮ ಬಂಗಾಳದ ಸರಸ್ವತಿ ಹಾಗೂ ಯೋಗೇಶ್ ದಂಪತಿ ಪುತ್ರ. ಜನವರಿ 18ರಂದು ಸಿಸೇರಿಯನ್ ಮಾಡಿ ವೈದ್ಯರು ಡೆಲಿವರಿ ಮಾಡಿದ್ದಾರೆ. ವಾಣಿ ವಿಲಾಸ್ ಆಸ್ಪತ್ರೆಯಲ್ಲಿ ಇದು ಮೊದಲ ಪ್ರಕರಣವಾಗಿದ್ದು, ಹುಟ್ಟಿದ ದಿನವೇ ಈ ಕಂದಮ್ಮ ಇತಿಹಾಸ ಸೃಷ್ಟಿಸಿದ್ದಾನೆ.

ಈ ಮಗುವಿನ ತೂಕ ಎರಡು, ಮೂರು ತಿಂಗಳು ಇರುವ ಮಗುವಿಗೆ ಬರಬೇಕಾಗಿತ್ತು. ಆದರೆ ಈ ಮಗು ಮಾತ್ರ ಹುಟ್ಟುತ್ತಲೇ ಬರೋಬ್ಬರಿ 5.78 ಕೆಜಿ ತೂಕವಿದೆ. ತಾಯಿಗೆ ಡಯಾಬಿಟಿಸ್ ಇದ್ದಾಗ ಹೀಗಾಗುವ ಸಾಧ್ಯತೆ ಇರುತ್ತೆ. ಆದರೆ ಸರಸ್ವತಿಗೆ ಡಯಾಬಿಟಿಸ್ ಕೂಡ ಇಲ್ಲ. ದೈತ್ಯ ಮಗು ಹುಟ್ಟಿದಾಗ ಸಾಕಷ್ಟು ರಿಸ್ಕ್ ಹಾಗೂ ಆರೋಗ್ಯ ಸಮಸ್ಯೆ ಇರುತ್ತೆ. ಆದರೆ ವೈದ್ಯಲೋಕಕ್ಕೆ ಅಚ್ಚರಿ ಅನ್ನುವಂತೆ ತಾಯಿ, ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಖುಷಿಯಿಂದ ತಿಳಿಸಿದ್ದಾರೆ.

ಹುಟ್ಟಿದ ತಕ್ಷಣ ಮಗು ಐಸಿಯುನಲ್ಲಿತ್ತು. ಸದ್ಯ ಮಗುವನ್ನು ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ. ಇನ್ನೊಂದು ಮೂರು ದಿನದಲ್ಲಿ ಡಿಸ್ಚಾರ್ಜ್ ಆಗಿ ಈ ಬಲಭೀಮ ಹೆತ್ತವರ ಜೊತೆ ಊರು ಸೇರಲಿದ್ದಾನೆ ಎಂದು ವೈದ್ಯ ಅಧೀಕ್ಷಕಿ ಗೀತಾ ಶಿವಮೂರ್ತಿ ಖುಷಿ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *