52 ಮಕ್ಕಳ ಆರೋಗ್ಯ ತಪಾಸಣೆ ಮಾಡಿದ್ದ ವೈದ್ಯೆಗೆ ಕೊರೊನಾ ದೃಢ

– ನಗರದ 4 ಅಂಗನವಾಡಿ ಮಕ್ಕಳಿಗೆ ಕೊರೊನಾಂತಕ

ಬೆಂಗಳೂರು: ಸುಮಾರು 52 ಮಕ್ಕಳ ಆರೋಗ್ಯ ತಪಾಸಣೆ ಮಾಡಿದ್ದ ವೈದ್ಯೆಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸಿಲಿಕಾನ್ ಸಿಟಿಯನ್ನು ಬೆಚ್ಚಿ ಬೀಳಿಸಿದೆ.

ಯಲಹಂಕ ಬಳಿಯ ಅಟ್ಟೂರು ಹಾಗೂ ಅಟ್ಟೂರು ಬಡಾವಣೆಯ ಅಂಗನವಾಡಿ ಸೇರಿದಂತೆ, ನಗರದ 4 ಅಂಗನವಾಡಿ ಕೇಂದ್ರಗಳಲ್ಲಿ ಈ ಡಾಕ್ಟರ್ ಆರೋಗ್ಯ ತಪಾಸಣೆ ನಡೆಸಿದ್ದರು. ಆಗ ತಾನೇ ಹುಟ್ಟಿದ ಮಕ್ಕಳಿಂದ 3 ವರ್ಷದ ಮಕ್ಕಳವರೆಗೆ ಆರೋಗ್ಯ ತಪಾಸಣೆ ನಡೆಸಿದ್ದರು. ಈಗ ಈ ಎಲ್ಲ ಮಕ್ಕಳ ಪೋಷಕರಲ್ಲಿ ಕೊರೊನಾ ಭೀತಿ ಹೆಚ್ಚಾಗಿದೆ.

4 ಅಂಗನವಾಡಿ ಕೇಂದ್ರದಲ್ಲಿ ಒಟ್ಟು 52 ಮಕ್ಕಳಿದ್ದರು ಎಂದು ಹೇಳಲಾಗಿದೆ. ಒಂದೊಂದು ಅಂಗನವಾಡಿಯಲ್ಲಿ 13 ಮಕ್ಕಳಿಗೆ ತಪಾಸಣೆ ನಡೆಸಿದ್ದರು ಎನ್ನಲಾಗಿದೆ. ಕಳೆದ ಜೂನ್ 22ರಂದು ವೈದ್ಯೆ ಮಕ್ಕಳಿಗೆ ತಪಾಸಣೆ ನಡೆಸಿದ್ದರು. ಆದರೆ ಜೂನ್ 27ಕ್ಕೆ ವೈದ್ಯೆಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಮಕ್ಕಳಿಗೆ ತಪಾಸಣೆ ನಡೆಸಿದ ಐದೇ ದಿನಗಳಲ್ಲಿ ವೈದ್ಯೆಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಮಕ್ಕಳ ಪೋಷಕರಿಗೆ ಆತಂಕ ಹೆಚ್ಚಾಗಿದೆ.

ಇದರ ಜೊತೆಗೆ ಮಕ್ಕಳ ಆರೋಗ್ಯ ತಪಾಸಣೆ ಮಾಡುವ ವೇಳೆ ವೈದ್ಯರು ಕೈಗೆ ಗ್ಲೌಸ್ ಕೂಡ ಬಳಸಿರಲಿಲ್ಲ ಎಂದು ಪೋಷಕರು ಆರೋಪ ಮಾಡಿದ್ದಾರೆ. ಸದ್ಯ ಗ್ಲೌಸ್ ಬಳಕೆ ಮಾಡದೇ ಇರುವುದರಿಂದ ತಪಾಸಣೆಗೆ ಒಳಗಾಗಿರುವ ಮಕ್ಕಳಿಗೆ ಸೋಂಕು ಹರಡುವ ಭೀತಿ ಹೆಚ್ಚಾಗಿದೆ.

Comments

Leave a Reply

Your email address will not be published. Required fields are marked *