500 ವರ್ಷಗಳ ಕನಸು ನನಸು- ರಾಮಮಂದಿರ ನಿರ್ಮಾಣಕ್ಕೆ ಪ್ರಧಾನಿ ಮೋದಿ ಚಾಲನೆ

ಅಯೋಧ್ಯೆ: ಶತಶತಮಾನಗಳಿಂದ ಕಾಯುತ್ತಿದ್ದ ಕನಸು ನನಸಾಗಿದ್ದು, ಧನುರ್ಧಾರಿ ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಭೂಮಿ ಪೂಜೆಯನ್ನು ಪ್ರಧಾನಿ ಮೋದಿ ಅವರು ನೆರವೇರಿಸಿದ್ದಾರೆ.

ದೇಶದ ಸಾಧು-ಸಂತರ ಧರ್ಮ ಹೋರಾಟ, ರಥಯಾತ್ರೆ ಆಂದೋಲನದ ಎಲ್ಲಾ ಮಜಲುಗಳನ್ನು ದಾಟಿ ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಇಂದು ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿದೆ. ಇಂದು ಮಧ್ಯಾಹ್ನ 12.44ರ ಶುಭ ಅಭಿಜಿನ್ ಲಗ್ನದ ಶತಾಭಿಷ ನಕ್ಷತ್ರದ ಮುಹೂರ್ತದಲ್ಲಿ ಪ್ರಧಾನಿ ಮೋದಿ ಅವರು ಭೂಮಿ ಪೂಜೆ ಮುಗಿಸಿದರು. ನಂತರ 40 ಕೆಜಿಯ ಬೆಳ್ಳಿ ಇಟ್ಟಿಗೆಯನ್ನು ಇಟ್ಟು ಮಂದಿರಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸಿದರು.

ಭೂಮಿ ಪೂಜೆಗೂ ಮೊದಲು ಶ್ರೀರಾಮನ ನವ ಮೂರ್ತಿಗಳಿಗೆ ಪೂಜೆ ಮಾಡಲಾಯಿತು. ಈ ವೇಳೆ ನಂದ, ಭದ್ರಾ, ಜಯ, ರಿಕ್ತಾ, ಪೂರ್ಣಾ ಹೆಸರಿನ ಇಟ್ಟಿಗೆಗೆ ಪೂಜೆ ನಡೆಯಿತು. ಶ್ರೀರಾಮ ಸೂರ್ಯವಂಶ ರಾಜನಾಗಿರುವ ಕಾರಣ ಮಧ್ಯಾಹ್ನ ಶಿಲಾನ್ಯಾಸ ಮಾಡಿದರೆ ಸೂರ್ಯನ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಭೂಮಿ ಪೂಜೆಗೆ ಸಮಯವನ್ನು ನಿಗದಿ ಮಾಡಲಾಗಿತ್ತು.

https://twitter.com/DDNational/status/1290906611226034176

ಈ ಕಾರ್ಯಕ್ರಮದಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಉಪಸ್ಥಿತರಿದ್ದರು.

ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸುವ ಮೊದಲು ಹೆಲಿಪ್ಯಾಡ್‍ನಿಂದ ನೇರವಾಗಿ ಹನುಮಂತ ದೇವಾಲಯಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಜೊತೆ ಹೋಗಿದ್ದರು. ಮಾಸ್ಕ್ ಧರಿಸಿ ಆರತಿ ಎತ್ತಿ ಹನುಮಂತ ದೇವರಿಗೆ ಪೂಜೆ ಸಲ್ಲಿಸಿದ್ದಾರೆ. ನಂತರ ಮೋದಿಗೆ ಬೆಳ್ಳಿಯ ಕೀರಿಟ, ರಾಮನಾಮ ಇರುವ ಶಾಲನ್ನು ಹೊದಿಸಿ ಗೌರವಿಸಲಾಯಿತು.

ಪ್ರಧಾನಿ ಮೋದಿ ರಾಮ್‍ಲಲ್ಲಾ ದರ್ಶನ ಮಾಡಿದ್ದು, ಈ ಮೂಲಕ ರಾಮ್‍ಲಲ್ಲಾ ದರ್ಶನ ಮಾಡಿದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನಂತರ ಅಲ್ಲಿಯೇ ಪಾರಿಜಾತ ಗಿಡವನ್ನು ನೆಟ್ಟಿದ್ದಾರೆ.

ಹನುಮಂತ ಇಲ್ಲದೇ ರಾಮನ ಯಾವುದೇ ಕೆಲಸ ಆರಂಭಗೊಳ್ಳುವುದಿಲ್ಲ. ಈ ಕಾರಣಕ್ಕೆ ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್ ಅವರು ಮೊದಲು ಹನುಮಂತನ ಪೂಜೆ ಮಾಡಿ ಆಶೀರ್ವಾದ ಪಡೆದುಕೊಂಡಿದ್ದರು. ನಂತರ ರಾಮ ದೇವಸ್ಥಾನದ ಭೂಮಿ ಪೂಜೆಯನ್ನು ಸಲ್ಲಿಸಿದ್ದಾರೆ.

Comments

Leave a Reply

Your email address will not be published. Required fields are marked *