ಮದುವೆ ಊಟ ಸೇವಿಸಿ 50ಕ್ಕೂ ಹೆಚ್ಚು ಮಂದಿ ಅಸ್ವಸ್ಥ -ಓರ್ವ ಸಾವು

ಚಿಕ್ಕಬಳ್ಳಾಪುರ: ಮದುವೆಯಲ್ಲಿ ಊಟ ಮಾಡಿದ್ದ 50ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಎಲ್ ಮುತ್ತಕದಹಳ್ಳಿ ಗ್ರಾಮದಲ್ಲಿ ನಡೆದಿದೆ.

ಪಾಯಲಹಳ್ಳಿ ಗ್ರಾಮದ 50 ವರ್ಷದ ನಾರಾಯಣಪ್ಪ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾರೆ. ಕಳೆದ ಗುರುವಾರ ಹಾಗೂ ಶುಕ್ರವಾರ ಚಿಕ್ಕಬಳ್ಳಾಪುರ ನಗರ ಹೊರವಲಯದ ಕಂದವಾರ ಬಳಿಯ ಕಲ್ಯಾಣಮಂಟಪದಲ್ಲಿ ಎಲ್ ಮುತ್ತಕದಹಳ್ಳಿ ಗ್ರಾಮದ ವಧು ಹಾಗೂ ಚಿಕ್ಕಬಳ್ಳಾಪುರ ತಾಲೂಕಿನ ಮನ್ನಾರಪುರ ಗ್ರಾಮದ ವರನೊಂದಿಗೆ ವಿವಾಹ ಜರುಗಿತ್ತು. ಈ ಮದುವೆಯ ಆರತಕ್ಷತೆ ವೇಳೆ ಊಟ ಮಾಡಿದ ಹಲವರು ಅಸ್ವಸ್ಥಗೊಂಡಿದ್ದಾರೆ. ಇದನ್ನೂ ಓದಿ: ಮದ್ವೆ ಮನೆಗೆ ಇನ್ಮುಂದೆ ಹೆಲ್ತ್ ಆಫೀಸರ್ಸ್ ಬರ್ತಾರೆ ಹುಷಾರ್

ಗುರುವಾರ ರಾತ್ರಿ ಊಟ ಮಾಡಿದ್ದು ಹಲವರಿಗೆ ಅಂದ್ರೆ ಮದುವೆ ಎಲ್ಲಾ ಮುಗಿದ ಬಳಿಕ ಶುಕ್ರವಾರ ಮಧ್ಯರಾತ್ರಿ ಹಾಗೂ ಶನಿವಾರ ಬೆಳಗ್ಗೆಯಿಂದ ಲೇಟ್ ರಿಯಾಕ್ಷನ್ ಆಗಿ ಅಸ್ವಸ್ಥರಾಗಿದ್ದಾರೆ. ಹಲವು ಮಂದಿ ಶಿಡ್ಲಘಟ್ಟ, ಚಿಕ್ಕಬಳ್ಳಾಪುರ ಸೇರಿದಂತೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಮಾಹಿತಿ ಪಡೆದುಕೊಂಡಿರುವ ಆರೋಗ್ಯ ಇಲಾಖೆಯ ಅಧಿಕಾರಿಗಳು ಎಲ್ ಮುತ್ತಕದಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರ ಆರಂಭಿಸಿ ಅಸ್ವಸ್ಥರಿಗೆ ವೈದ್ಯಕೀಯ ಸೌಲಭ್ಯ ಕಲ್ಪಿಸುತ್ತಿದ್ದಾರೆ.

ಶನಿವಾರ ಅಸ್ವಸ್ಥಗೊಂಡಿದ್ದ ನಾರಾಯಣಪ್ಪ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ನಾರಾಯಣಪ್ಪ ಸಾವನ್ನಪ್ಪಿದ್ದಾರೆ. ನಾರಾಯಣಪ್ಪ ಸಾವಿನ ನಂತರ ಮದುವೆ ಊಟ ಮಾಡಿದವರೆಲ್ಲಿ ಭೀತಿ ಆವರಿಸಿದೆ. ಹೀಗಾಗಿ ಮದುವೆ ಊಟ ಸವಿದವರು ವೈದ್ಯರ ಬಳಿ ಬಂದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಯಾವುದೇ ತೊಂದರೆ ಇಲ್ಲ ಎಂದು ತಾಲೂಕು ಆರೋಗ್ಯಾಧಿಕಾರಿ ವೆಂಕಟೇಶ್ ಮೂರ್ತಿ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

Comments

Leave a Reply

Your email address will not be published. Required fields are marked *