50 ದಿನಗಳ ನಂತ್ರ ದೆಹಲಿಯಿಂದ ಬೆಂಗ್ಳೂರಿಗೆ ಬಂತು ವಿಶೇಷ ರೈಲು

– 1 ಸಾವಿರಕ್ಕೂ ಹೆಚ್ಚು ಮಂದಿ ಆಗಮನ
– 11 ಬಿಎಂಟಿಸಿ ಬಸ್‍ಗಳ ವ್ಯವಸ್ಥೆ, 50 ರೂ. ಚಾರ್ಜ್

ಬೆಂಗಳೂರು: ಕೊರೊನಾ ಲಾಕ್‍ಡೌನ್‍ನಿಂದ 50 ದಿನಗಳ ಬಳಿಕ ದೆಹಲಿಯಿಂದ ಬೆಂಗಳೂರಿನ ಮೆಜೆಸ್ಟಿಕ್ ರೈಲು ನಿಲ್ದಾಣಕ್ಕೆ ವಿಶೇಷ ರೈಲು ಬಂದಿದೆ.

ಇಂದು ಬೆಳಗ್ಗೆ ಸುಮಾರು 7.15ಕ್ಕೆ ಬೆಂಗಳೂರು ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಆಗಮಿಸಿದೆ. ಕೇಂದ್ರ ಸರ್ಕಾರ ದೇಶಾದ್ಯಂತ 30 ವಿಶೇಷ ರೈಲು ಸಂಚಾರ ಆರಂಭಿಸಲು ಅವಕಾಶ ಮಾಡಿಕೊಟ್ಟಿತ್ತು. ಹೀಗಾಗಿ ಮಂಗಳವಾರ ರಾತ್ರಿ ದೆಹಲಿಯಿಂದ ಬೆಂಗಳೂರಿಗೆ ವಿಶೇಷ ರೈಲು ಹೊರಟಿತ್ತು. ರೈಲಿನಲ್ಲಿ ಸುಮಾರು 1,000ಕ್ಕೂ ಹೆಚ್ಚು ಪ್ರಯಾಣಿಕರು ಆಗಮಿಸಿದ್ದಾರೆ.

ಪ್ಲಾಟ್ ಫಾರಂ 1ಕ್ಕೆ ರೈಲು ಬಂದಿದ್ದು, ಎಲ್ಲಾ ಪ್ರಯಾಣಿಕರು ಒಂದೇ ಬಾರಿ ಇಳಿಯುವಂತಿಲ್ಲ. ಒಂದು ಬೋಗಿ ನಂತರ ಇನ್ನೊಂದು ಬೋಗಿಯಲ್ಲಿದ್ದ ಪ್ರಯಾಣಿಕರು ಇಳಿಯುತ್ತಿದ್ದು, ಅವರಿಗೆ ವೈದ್ಯರು ಥರ್ಮಲ್ ಸ್ಕ್ರೀನಿಂಗ್ ಮಾಡುತ್ತಿದ್ದಾರೆ. ನಂತರ ಮುಖ್ಯ ದ್ವಾರದ ಮೂಲಕವೇ ಪ್ರಯಾಣಿಕರು ಹೊರಗೆ ಹೋಗಬೇಕಾಗುತ್ತದೆ.

ದೆಹಲಿಯಿಂದ ಬಂದ ಎಲ್ಲಾ ಪ್ರಯಾಣಿಕರನ್ನು ಬೆಂಗಳೂರಿನಲ್ಲೇ ಕ್ವಾರಂಟೈನ್ ಮಾಡಲಾಗುತ್ತದೆ. ಗಾಂಧಿನಗರ, ಚಿಕ್ಕಪೇಟೆ, ಕಾಟನ್ ಪೇಟೆ ಸೇರಿದಂತೆ ನಗರದ ಸುಮಾರು 90 ವಿವಿಧ ಹೋಟೆಲ್‍ಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ವಿಶೇಷ ಆಯುಕ್ತ ರವಿಕುಮಾರ್ ಸುರಪುರ ನೇತೃತ್ವದ ತಂಡದ ಸಿದ್ಧತೆ ಮಾಡಿಕೊಂಡಿದೆ. ಪ್ರಯಾಣಿಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಹೋಟೆಲ್ ಆಯ್ಕೆಗೆ ಅವಕಾಶ ಮಾಡಿಕೊಡಲಾಗಿದೆ. ಆರ್ಥಿಕವಾಗಿ ಹಿಂದೂಳಿದ ಪ್ರಯಾಣಿಕರಿಗೆ ಸರ್ಕಾರಿ ಹಾಸ್ಟೆಲ್, ಕಲ್ಯಾಣ ಮಂಟಪಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.

ರೈಲ್ವೆ ನಿಲ್ದಾಣಕ್ಕೆ ಯಾವುದೇ ಪ್ರಯಾಣಿಕರಿಗೆ ಅವಕಾಶವಿಲ್ಲ. ಆರೋಗ್ಯ ಅಧಿಕಾರಿಗಳು, ಬಿಬಿಎಂಪಿ, ಪೊಲೀಸರಿಗಷ್ಟೇ ಒಳಗೆ ಅವಕಾಶ ಮಾಡಿಕೊಡಲಾಗಿದೆ. ಅಲ್ಲದೇ ರೈಲು ನಿಲ್ದಾಣದಲ್ಲಿ ಎಂಟ್ರಿ ಮತ್ತು ಎಕ್ಸಿಟ್ ಗೇಟ್‍ಗಳಲ್ಲಿ ಬ್ಯಾರಿಕೇಡ್ ಹಾಕಿ ಬಿಗಿ ಭದ್ರತೆಯನ್ನು ಪೊಲೀಸರು ಕೈಗೊಂಡಿದ್ದಾರೆ.

11 ಬಿಎಂಟಿಸಿ ಬಸ್‍ಗಳ ಮೂಲಕ ನಿಗದಿತ ಹೋಟೆಲ್‍ಗಳಿಗೆ ಕ್ವಾರಂಟೈನ್‍ಗೆ ಪೊಲೀಸರು ಕರೆದುಕೊಂಡು ಹೋಗಲಿದ್ದಾರೆ. ಪ್ರತಿ ಬಸ್ಸಿನಲ್ಲಿ 25 ಮಂದಿ ಪ್ರಯಾಣಿಕರಿಗೆ ಮಾತ್ರ ಅವಕಾಶ. ಅಲ್ಲದೇ ಪ್ರತಿಯೊಬ್ಬ ಪ್ರಯಾಣಿಕರಿಗೂ 50 ರೂ. ಚಾರ್ಜ್ ನಿಗದಿಪಡಿಸಲಾಗಿದೆ. ಕ್ವಾರಂಟೈನ್ ಕರೆದುಕೊಂಡು ಹೋಗುವ ಬಸ್ ಚಾಲಕರಿಗೆ ಗ್ಲೌಸ್, ಮಾಸ್ಕ್ ಕಡ್ಡಾಯ ಮಾಡಲಾಗಿದೆ. ದೆಹಲಿಯಿಂದ ಬಂದ ಎಲ್ಲಾ ಪ್ರಯಾಣಿಕರು 14 ದಿನದವರೆಗೂ ಖಾಸಗಿ ಹೋಟೆಲ್‍ನಲ್ಲೇ ವಾಸ್ತವ್ಯ ಇರಬೇಕು.

 

Comments

Leave a Reply

Your email address will not be published. Required fields are marked *