50 ಜನರ ಸಮಸ್ಯೆ ಆಲಿಸಲು 24 ಕಿ.ಮೀ. ನಡೆದ ಅರುಣಾಚಲ ಸಿಎಂ

– ರಸ್ತೆಯಿಲ್ಲದ ಕಾರಣ 11 ಗಂಟೆಗಳ ಕಾಲ ಕಾಲ್ನಡಿಗೆ
– ಜನರ ಜೊತೆ 2 ದಿನ ಕಳೆದು, ಸಮಸ್ಯೆ ಅರಿತ ಸಿಎಂ

ಇಟಾನಗರ: ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಅವರು ತಮ್ಮ ಜನರನ್ನು ಭೇಟಿ ಮಾಡಲು ಸುಮಾರು 11 ಗಂಟೆಗಳ ಕಾಲ 24 ಕಿ.ಮೀ ದೂರ ನಡೆದುಕೊಂಡು ಹೋಗುವ ಮೂಲಕ ಮಾದರಿಯಾಗಿದ್ದಾರೆ.

ಸಿಎಂ ಪೆಮಾ ಖಂಡು ತವಾಂಗ್ ಜಿಲ್ಲೆಯ ಮುಕ್ತೋ ಕ್ಷೇತ್ರದ ಹಳ್ಳಿಯ ಜನರನ್ನು ಭೇಟಿ ಮಾಡಲು 24 ಕಿ.ಮೀ ದೂರ ಪ್ರಯಾಣ ಮಾಡಿದ್ದಾರೆ. 41 ವರ್ಷದ ಮುಖ್ಯಮಂತ್ರಿ ಪರ್ವತ ಭೂ ಪ್ರದೇಶಗಳು ಮತ್ತು ಕಾಡುಗಳ ಮೂಲಕ ನಡೆದು ತವಾಂಗ್‍ನಿಂದ 97 ಕಿ.ಮೀ ದೂರದಲ್ಲಿರುವ ಲುಗುಥಾಂಗ್ ಗ್ರಾಮಕ್ಕೆ ಹೋಗಿದ್ದರು.

ಸಿಎಂ ಪೆಮಾ ಖಂಡು ತವಾಂಗ್ ಜಿಲ್ಲೆಯ ಮುಕ್ತೋ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. ಅವರ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಲುಗುಥಾಂಗ್ ಗ್ರಾಮ ಭಾರತ ಮತ್ತು ಚೀನಾ ಗಡಿಗೆ ಹೊಂದಿಕೊಂಡಿರುವ ಪ್ರದೇಶದಲ್ಲಿನ ಕುಗ್ರಾಮವಾಗಿದೆ. ಸಮುದ್ರ ಮಟ್ಟದಿಂದ 14,500 ಅಡಿ ಎತ್ತರದಲ್ಲಿರುವ ಈ ಗ್ರಾಮದಲ್ಲಿ 10 ಮನೆಗಳಿದ್ದು, ಅದರಲ್ಲಿ 50 ಜನರು ವಾಸ ಮಾಡುತ್ತಿದ್ದಾರೆ.

ಲುಗುಥಾಂಗ್ ಗ್ರಾಮಕ್ಕೆ ಯಾವುದೇ ರಸ್ತೆ ಸಂಪರ್ಕ ಇಲ್ಲ. ಹೀಗಾಗಿ ಸಿಎಂ ಖಂಡು ತಮ್ಮ ಕ್ಷೇತ್ರದ ಜನರ ಸಮಸ್ಯೆಗಳನ್ನು ಅರಿಯಲೆಂದು 3 ದಿನಗಳ ಹಿಂದೆ ಪ್ರವಾಸ ಕೈಗೊಂಡಿದ್ದರು. ಬಸ್ ಇಲ್ಲದ ಕಾರಣ ಸುಮಾರು 11 ಗಂಟೆಗಳ ಕಾಲ ನಿರಂತರವಾಗಿ ನಡೆದುಕೊಂಡು 24 ಕಿ.ಮೀ. ದೂರವನ್ನು ಕಾಲ್ನಡಿಗೆಯ ಮೂಲಕ ತಲುಪಿದ್ದರು. ನಂತರ ಎರಡು ದಿನ ಗ್ರಾಮದಲ್ಲೇ ಉಳಿದುಕೊಂಡು ಅವರ ಸಮಸ್ಯೆಗಳನ್ನು ಆಲಿಸಿ ವಾಪಸ್ ಬಂದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಖಂಡು, “24 ಕಿ.ಮೀ. ಕಾಲ್ನಡಿಗೆ. 11 ಗಂಟೆಗಳ ತಾಜಾ ಗಾಳಿ ಮತ್ತು ಪ್ರಕೃತಿ ಅತ್ಯುತ್ತಮ. ತವಾಂಗ್ ಜಿಲ್ಲೆಯ ಕಾರ್ಪು-ಲಾ (16,000 ಅಡಿ) ದಿಂದ ಲುಗುಥಾಂಗ್ (14,500 ಅಡಿ) ದಾಡಿದೆ. ಸ್ವರ್ಗ ಸ್ಪರ್ಶಿಸಿದ ಅನುಭವವಾಗಿದೆ” ಎಂದು ಬರೆದುಕೊಂಡಿದ್ದಾರೆ. ಮುಖ್ಯಮಂತ್ರಿ ಜೊತೆ ತವಾಂಗ್ ಶಾಸಕ, ಗ್ರಾಮಸ್ಥರು ಮತ್ತು ಒಬ್ಬ ಭದ್ರತಾ ಸಿಬ್ಬಂದಿ ಇದ್ದರು.

Comments

Leave a Reply

Your email address will not be published. Required fields are marked *