ಬಿಷ್ಣೋಯ್, ಗೋದಾರಾ ಗ್ಯಾಂಗ್‍ನ ಐವರು ಶೂಟರ್‌ಗಳ ಅರೆಸ್ಟ್ – ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

ಚಂಡೀಗಢ: ಲಾರೆನ್ಸ್ ಬಿಷ್ಣೋಯ್ (Lawrence Bishnoi) ಮತ್ತು ರೋಹಿತ್ ಗೋದಾರಾ (Rohit Godara) ಗ್ಯಾಂಗ್‍ಗೆ ಸೇರಿದ ಐವರು ಶೂಟರ್‌ಗಳನ್ನು ಗುರುಗ್ರಾಮ್ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ದಿನೇಶ್ ಅಲಿಯಾಸ್ ದೀನು, ಜಗದೀಶ್ ಅಲಿಯಾಸ್ ಜಗ್ಗು, ವಿಷ್ಣು, ಸಾಗರ್ ಮತ್ತು ಪ್ರದೀಪ್ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ 10 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಮೂರು ವಿದೇಶಿ ನಿರ್ಮಿತ ಗ್ಲೋಕ್ ಪಿಸ್ತೂಲ್, ಐದು ಸ್ವಯಂಚಾಲಿತ ಪಿಸ್ತೂಲ್‍ಗಳು ಮತ್ತು 55 ಸಜೀವ ಕಾಟ್ರಿಡ್ಜ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಭದ್ರತಾ ಪಡೆಗಳಿಂದ ಎನ್‍ಕೌಂಟರ್ – ಇಬ್ಬರು ಮಹಿಳೆಯರು ಸೇರಿ ಮೂವರು ನಕ್ಸಲರ ಹತ್ಯೆ

ಎಲ್ಲಾ ಶೂಟರ್‍ಗಳು ದರೋಡೆಕೋರರಾದ ಲಾರೆನ್ಸ್ ಬಿಷ್ಣೋಯ್ ಮತ್ತು ರೋಹಿತ್ ಗೋದಾರಾ ಗ್ಯಾಂಗ್ ಜೊತೆ ಕೆಲಸ ಮಾಡಿದ್ದಾರೆ. ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಿನೇಶ್‍ನನ್ನು ಶನಿವಾರ ಫರೂಖ್‍ನಗರದಲ್ಲಿ ಬಂಧಿಸಲಾಗಿತ್ತು. ಆತನನ್ನು ವಿಚಾರಣೆ ನಡೆಸಿದಾಗ ಉಳಿದ ಆರೋಪಿಗಳ ಬಗ್ಗೆ ಮಾಹಿತಿ ನಿಡಿದ್ದ. ಈ ಮಾಹಿತಿ ಆಧರಿಸಿ ಉಳಿದ ನಾಲ್ವರನ್ನು ಪಂಜಾಬ್‍ನ ಫಾಜಿಲ್ಕಾ ಬಳಿಯ ಅಬೋಹರ್‍ನಲ್ಲಿ ಬಂಧಿಸಲಾಗಿದೆ.

ಫರೂಖ್‍ನಗರದಲ್ಲಿ ವೈ-ಫೈ ಕನೆಕ್ಷನ್ ಪ್ರೊವೈಡರ್ ಶಾಪ್ ನಡೆಸುತ್ತಿರುವ ದಿನೇಶ್ ದರೋಡೆಕೋರರಾದ ಲಾರೆನ್ಸ್ ಬಿಷ್ಣೋಯ್ ಮತ್ತು ರೋಹಿತ್ ಗೋಡಾರಾರೊಂದಿಗೆ ಸಂಪರ್ಕದಲ್ಲಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ. ಆತ ಶೂಟರ್‌ಗಳಿಗಾಗಿ ಅಡಗುದಾಣಗಳನ್ನು ಸಿದ್ಧಪಡಿಸುತ್ತಿದ್ದ ಎಂದು ತಿಳಿದು ಬಂದಿದೆ. ಅಲ್ಲದೇ ಗುರುಗ್ರಾಮ್ ಪ್ರದೇಶದಲ್ಲಿ ಗ್ಯಾಂಗ್ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಮುಂದಾಗಿತ್ತು ಎಂದು ಪೊಲಿಸರು ತಿಳಿಸಿದ್ದಾರೆ.

ಬಂಧಿತ ಆರೋಪಿಗಳು ಗ್ಯಾಂಗ್ ಲೀಡರ್‌ಗಳ ಸೂಚನೆಯ ಮೇರೆಗೆ ಹರಿಯಾಣ, ರಾಜಸ್ಥಾನ ಮತ್ತು ಪಂಜಾಬ್ ಪ್ರದೇಶಗಳಲ್ಲಿ ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿದೆ. ಇದನ್ನೂ ಓದಿ: ಸೀರಿಯಲ್‌ ಚಿತ್ರೀಕರಣದ ವೇಳೆ ಮಾಡಿದ ತಪ್ಪು – ʻಸೀತಾರಾಮʼ ನಟಿ ವೈಷ್ಣವಿ ಗೌಡಗೆ ಟ್ರಾಫಿಕ್‌ ಫೈನ್‌!