5 ಮಂದಿಯ ಬಾಳಿಗೆ ಬೆಳಕಾದ 20 ತಿಂಗಳ ಹೆಣ್ಣು ಮಗು!

– 5 ಮಂದಿ ರೋಗಿಗಳ ಜೀವ ಉಳಿಸಿದ ದೇವತೆ
– ಬಾಲ್ಕನಿಯಿಂದ ಬಿದ್ದ ಮೃತಪಟ್ಟಿದ್ದ ಧನಿಷ್ಠಾ

ನವದೆಹಲಿ: 20 ತಿಂಗಳ ಪುಟ್ಟ ಕಂದಮ್ಮ 5 ಮಂದಿಯ ಪ್ರಾಣ ಉಳಿಸುವ ಮೂಲಕ ಭಾರತದ ಅತ್ಯಂತ ಕಿರಿಯ ದಾನಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.

ಧನಿಷ್ಠಾ ತಾನು ಸಾವಿಗೀಡಾದರೂ 5 ಮಂದಿಯ ಪ್ರಾಣ ಉಳಿಸಿದ ಪುಟ್ಟ ಕಂದಮ್ಮ. ನವದೆಹಲಿಯ ರೋಹಿಣಿ ಮೂಲದವಳಾಗಿರುವ ಈಕೆ, ಮನೆಯ ಬಾಲ್ಕನಿಯಿಂದ ಬಿದ್ದು ಗಂಭೀರ ಗಾಯಗೊಂಡಿದ್ದಳು. ಪ್ರಜ್ಞಾಹೀನಳಾಗಿದ್ದ ಆಕೆಯನ್ನು ಪೋಷಕರು ಕೂಡಲೇ ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪುಟ್ಟ ಕಂದಮ್ಮನ ಸ್ಥಿತಿ ಚಿಂತಾಜನಕವಾಗಿದ್ದರಿಂದ ಆಕೆ ಬದುಕುಳಿಯುವುದು ಅಸಾಧ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಆಕೆಯ ದೇಹದ ಅಂಗಾಂಗಗಳನ್ನು ದಾನ ಮಾಡಲು ಹೆತ್ತವರು ನಿರ್ಧಾರ ಮಾಡಿದರು. ಅಂತೆಯೇ ಪುಟ್ಟ ಕಂದಮ್ಮ ಸದ್ಯ 5 ಮಂದಿ ರೋಗಿಗಳ ಪ್ರಾಣ ಉಳಿಸಿದ ದೇವತೆಯಾಗಿದ್ದಾಳೆ.

ಪುಟಾಣಿಯ ಹೃದಯ, ಲಿವರ್ ಹಾಗೂ ಎರಡೂ ಕಿಡ್ನಿಗಳು ಮುಂತಾದ ದೇಹದ ಮುಖ್ಯವಾದ ಅಂಗಾಂಗಗಳನ್ನು ಆಸ್ಪತ್ರೆ ಸಿಬ್ಬಂದಿ 5 ಮಂದಿ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಜೀವ ಉಳಿಸಿದ್ದಾರೆ.

ಜನವರಿ 8 ರಂದು ಧನಿಷ್ಠಾ ಆಟವಾಡುತ್ತಿದ್ದ ಸಂದರ್ಭದಲ್ಲಿ ಮನೆಯ ಬಾಲ್ಕನಿಯ ಮೊದಲ ಮಹಡಿಯಿಂದ ಕೆಳಕ್ಕೆ ಬಿದ್ದಿದ್ದಳು. ಗಂಭೀರ ಗಾಯಗೊಂಡಿದ್ದ ಆಕೆ ಜನವರಿ 11ರಂದು ಮೃತಪಟ್ಟಿದ್ದಾಳೆ. ಅವಳ ದೇಹದ ಅಂಗಾಂಗಗಳು ಅತ್ಯುತ್ತಮ ಸ್ಥಿತಿಯಲ್ಲಿದ್ದವು. ತಮ್ಮ ಮಗಳನ್ನು ಮತ್ತೆ ಎಂದಿಗೂ ಕಾಣದೇ ಇರುವುದನ್ನು ಮನಗಂಡ ಪೋಷಕರಾದ ಆಶಿಶ್ ಕುಮಾರ್ ಹಾಗೂ ಬಬಿತಾ ಆಕೆಯ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದರು.

ನಾವು ಆಸ್ಪತ್ರೆಯಲ್ಲಿದ್ದ ಸಂದರ್ಭದಲ್ಲಿ ಅಂಗಾಂಗಗಳ ಅವಶ್ಯಕತೆ ಇರುವ ಅನೇಕ ರೋಗಿಗಳನ್ನು ಭೇಟಿ ಮಾಡಿದ್ದೇವೆ. ಹೀಗಾಗಿ ನಾವು ನಮ್ಮ ಮಗುವನ್ನು ಕಳೆದುಕೊಂಡರೂ ಆಕೆ ಬದುಕು ಮುಂದುವರಿಸುತ್ತಾಳೆ. ಈ ಮೂಲಕ ಆಕೆ ಬೇರೆಯವರಿಗೆ ಜೀವ ನೀಡುತ್ತಾಳೆ ಎಂದು ತಂದೆ ಆಶಿಶ್ ಕುಮಾರ್ ಗದ್ಗದಿತರಾದರು.

ಪುಟ್ಟ ಕಂದಮ್ಮನ ಕುಟುಂಬದ ಈ ಉದಾತ್ತ ಕಾರ್ಯವು ನಿಜವಾಗಿಯೂ ಪ್ರಶಂಸನೀಯವಾಗಿದೆ. ಈ ಮಹತ್ತರ ಕಾರ್ಯ ಇತರರನ್ನು ಪ್ರೇರೇಪಿಸಬೇಕು. ನಮ್ಮ ದೇಶದಲ್ಲಿ ಅಂಗಾಂಗ ದಾನ ಮಾಡುವುದು ಅತ್ಯಂತ ವಿರಳ. ಅಂಗಾಂಗಗಳ ಕೊರತೆಯಿಂದ ಪ್ರತಿ ವರ್ಷ ಸರಾಸರಿ ಐದು ಲಕ್ಷ ಭಾರತೀಯರು ಸಾಯುತ್ತಾರೆ ಎಂದು ಸರ್ ಗಂಗಾ ರಾಮ್ ಆಸ್ಪತ್ರೆಯ ಅಧ್ಯಕ್ಷ ಡಿ.ಎಸ್ ರಾಣಾ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *