5ಎ ಕಾಲುವೆ ಹೋರಾಟ – ಸ್ಪಂದನೆ ಸಿಗದಿದ್ದಕ್ಕೆ ವಿಷ ಕುಡಿಯಲು ಮುಂದಾದ ರೈತ

ರಾಯಚೂರು: ಎನ್‍ಆರ್‍ಬಿಸಿ 5ಎ ಕಾಲುವೆಗೆ ಆಗ್ರಹಿಸಿ ನಗರದಲ್ಲಿ ನೂರಾರು ರೈತರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲಾಧಿಕಾರಿಗಳು ಹೋರಾಟ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸದ ಹಿನ್ನೆಲೆ ರೈತರು ವಿಷ ಕುಡಿಯಲು ಮುಂದಾಗಿದ್ದಾರೆ. ಈ ವೇಳೆ ರೈತರು ವಿಷ ಕುಡಿಯುವುದನ್ನು ಸ್ಥಳದಲ್ಲಿದ್ದ ಪೊಲೀಸರು ತಡೆದಿದ್ದಾರೆ.

ರೈತರ ಹೋರಾಟಕ್ಕೆ ಸ್ಪಂದಿಸಿ ಮನವಿ ಪತ್ರ ಪಡೆಯಲು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಾರದ ಹಿನ್ನೆಲೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೋರಾಟ ನಿರತ ರೈತರು ಬೆದರಿಕೆ ಹಾಕಿದ್ದಾರೆ. ಒಂದೆಡೆ ಸರ್ಕಾರ ಹೋರಾಟಕ್ಕೆ ಸ್ಪಂದಿಸುತ್ತಿಲ್ಲ. ಇತ್ತ ಜಿಲ್ಲಾಧಿಕಾರಿ ಕನಿಷ್ಠ ಮನವಿ ಪತ್ರ ಸ್ವೀಕರಿಸಲು ಬರುತ್ತಿಲ್ಲ ಎಂದು ರೈತ ಮಲ್ಲಿಕಾರ್ಜುನ್ ವಿಷ ಕುಡಿಯಲು ಯತ್ನಿಸಿದ್ದಾನೆ. ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ರೈತನನ್ನು ತಡೆದಿದ್ದಾರೆ. ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತರು ಹೋರಾಟ ಮುಂದುವರೆಸಿದ್ದಾರೆ.

ಮಸ್ಕಿ ಭಾಗದ 58 ಹಳ್ಳಿಗಳಿಗೆ ನೀರು ಒದಗಿಸುವ ಯೋಜನೆಗೆ ಆಗ್ರಹಿಸಿ 105 ದಿನಗಳಿಂದ ರೈತರು ಅನಿರ್ಧಿಷ್ಟವಾಧಿ ಹೋರಾಟ ನಡೆಸುತ್ತಿದ್ದಾರೆ. ಸರ್ಕಾರ ಸ್ಪಂದಿಸದ ಹಿನ್ನೆಲೆ ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ರಾಯಚೂರಿನಲ್ಲಿ ಬೃಹತ್ ಹೋರಾಟ ನಡೆಸಿದರು. ನಗರದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರೈತರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಮೆರವಣಿಗೆ ಹಾಗೂ ಪ್ರತಿಭಟನೆಯಲ್ಲಿ ಮಕ್ಕಳು, ಮಹಿಳೆಯರು, ವಯೋವೃದ್ದ ರೈತರು ಸಹ ಭಾಗವಹಿಸಿದರು.

Comments

Leave a Reply

Your email address will not be published. Required fields are marked *