ಎನ್‌ಆರ್‌ಸಿ ಎಫೆಕ್ಟ್ – 2 ತಿಂಗ್ಳಲ್ಲಿ 445 ಬಾಂಗ್ಲಾದೇಶೀಯರು ಭಾರತದಿಂದ ಹೊರಕ್ಕೆ

ಢಾಕಾ: ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಭಾರತದಲ್ಲಿ ಜಾರಿಯಾದ ಹಿನ್ನೆಲೆ ಕಳೆದ 2 ತಿಂಗಳಲ್ಲಿ ಸುಮಾರು 445 ಬಾಂಗ್ಲಾದೇಶೀಯರು ಭಾರತದಿಂದ ಸ್ವದೇಶಕ್ಕೆ ವಾಪಸ್ಸಾಗಿದ್ದಾರೆ ಎಂದು ಬಾಂಗ್ಲಾದೇಶ್ ಪ್ಯಾರಾಮಿಲಿಟರಿ ಫೋರ್ಸ್ ಮುಖ್ಯಸ್ಥರು ತಿಳಿಸಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಬಾರ್ಡರ್ ಗಾರ್ಡ್ ಬಾಂಗ್ಲಾದೇಶ(ಬಿಜಿಬಿ) ನಿರ್ದೇಶಕ ಜನರಲ್ ಮೊಹಮದ್ ಶಫೀನುಲ್ ಇಸ್ಲಾಮ್ ಅವರು ಮಾತನಾಡಿ, ಕಳೆದ 2 ತಿಂಗಳಲ್ಲಿ ಭಾರತದಿಂದ ಸುಮಾರು 445 ಬಾಂಗ್ಲಾದೇಶೀಯರು ಸ್ವದೇಶಕ್ಕೆ ವಾಪಸ್ ಆಗಿದ್ದಾರೆ. ಅಲ್ಲದೆ 2019ರಲ್ಲಿ ಭಾರತದಿಂದ ಬಾಂಗ್ಲಾದೇಶಕ್ಕೆ ಅಕ್ರಮವಾಗಿ ನುಸುಳಿದ ಆರೋಪದ ಮೇರೆಗೆ ಸುಮಾರು 1,000 ಮಂದಿ ನಿರಾಶ್ರಿತರನ್ನು ಬಂಧಿಸಲಾಗಿದೆ. ಅವರ ದಾಖಲೆಗಳನ್ನು ಪರಿಶೀಲಿಸಿದಾಗ 445 ಮಂದಿ ಬಾಂಗ್ಲಾದೇಶಿಯರು ಭಾರತದಿಂದ ವಾಪಸ್ ಬಂದಿದ್ದಾರೆ ಎನ್ನುವುದು ತಿಳಿದು ಬಂದಿದೆ. ನವೆಂಬರ್ ಮತ್ತು ಡಿಸೆಂಬರ್ ಎರಡು ತಿಂಗಳಲ್ಲಿ 445 ಮಂದಿ ಬಾಂಗ್ಲಾದೇಶಕ್ಕೆ ವಾಪಸ್ಸಾಗಿದ್ದಾರೆ ಎಂದು ಹೇಳಿದರು.

ಬಾಂಗ್ಲಾದೇಶಿಯರು ಸ್ವದೇಶಕ್ಕೆ ವಾಪಸ್ಸಾದ ಬಗ್ಗೆ ಮಾಹಿತಿ ನೀಡಿದ ಬಳಿಕ ಎನ್‌ಆರ್‌ಸಿ ಬಗ್ಗೆ ಮಾತನಾಡಿದ ಅವರು,ಎನ್‌ಆರ್‌ಸಿ ಭಾರತದ ಆಂತರಿಕ ವಿಚಾರ. ಭಾರತ ಹಾಗೂ ಬಾಂಗ್ಲಾದೇಶ ಎರಡು ರಾಷ್ಟ್ರಗಳ ನಡುವೆ ಉತ್ತಮ ಬಾಂಧವ್ಯವಿದೆ. ಗಡಿಯಲ್ಲಿ ಬಿಜಿಬಿ ಸ್ಮಗ್ಲಿಂಗ್ ಮತ್ತು ಇತರೆ ಅಕ್ರಮ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಡಲಿದೆ ಎಂದರು.

ಈ ಹಿಂದೆ ನಾನು ಭಾರತಕ್ಕೆ ಭೇಟಿ ಕೊಟ್ಟಾಗ ಭಾರತೀಯ ಗಡಿ ಭದ್ರತಾ ಪಡೆ ಮುಖ್ಯಸ್ಥರ ಜೊತೆ ಮಾತುಕತೆ ನಡೆದಿತ್ತು. ಈ ವೇಳೆ ಗಡಿಯಲ್ಲಿ ನಡೆಯುವ ಸ್ಮಗ್ಲಿಂಗ್ ಮತ್ತು ಇತರೆ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವ ಬಗ್ಗೆ ಚರ್ಚೆ ನಡೆದಿತ್ತು. ಅದನ್ನು ಬಿಟ್ಟು ಎನ್‌ಆರ್‌ಸಿ ಬಗ್ಗೆ ನಾವು ಚರ್ಚೆ ನಡೆಸಿರಲಿಲ್ಲ ಎಂದು ಇಸ್ಲಾಮ್ ಅವರು ತಿಳಿಸಿದರು.

Comments

Leave a Reply

Your email address will not be published. Required fields are marked *