ರಾಯಚೂರು: ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ 424ನೇ ವರ್ಧಂತ್ಯೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ರಾಘವೇಂದ್ರ ಸ್ವಾಮಿಗಳು ಜನಿಸಿ ಇಂದಿಗೆ 424 ವರ್ಷಗಳಾಗಿದ್ದು ಮಠದಲ್ಲಿ ಧಾರ್ಮಿಕ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳ ವೈಭವ ಮನೆ ಮಾಡಿದೆ.
ಪ್ರತಿ ವರ್ಷದಂತೆ ಈ ಬಾರಿಯೂ ತಿರುಪತಿ ತಿರುಮಲ ದೇವಾಲಯದಿಂದ ರಾಯರಿಗೆ ಪಟ್ಟವಸ್ತ್ರ ಸಮರ್ಪಣೆ ನಡೆಯಿತು. ತಮಿಳುನಾಡು ಮೂಲದ ಭಕ್ತರಿಂದ ನಾದಹಾರ ಕಾರ್ಯಕ್ರಮ ನಡೆಯಲಿದೆ. 400ಕ್ಕೂ ಹೆಚ್ಚು ಕಲಾವಿದರು ಸುಮಾರು 15 ವರ್ಷಗಳಿಂದ ನಾದಹಾರ ಸಂಗೀತ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಮಠದಲ್ಲಿ ಸಾವಿರಾರು ಭಕ್ತರಿಂದ ನಾದ ಸಮರ್ಪಣೆ ನಡೆಯಲಿದೆ. ವಿಶೇಷ ಪೂಜೆಯ ಬಳಿಕ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ಭಕ್ತರಿಗೆ ಆಶೀರ್ವಚನ ನೀಡಿದರು.

ಮಂಗಳವಾರ ದೇಶದ ಗಡಿಕಾಯೋ ವೀರಯೋಧರ ಕ್ಷೇಮಕ್ಕಾಗಿ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಹಾರುದ್ರಯಾಗ ನಡೆಸಿದ್ದರು. ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ಮಹಾರುದ್ರಯಾಗ ನಡೆಯಿತು. ಮಹಾರುದ್ರ ಯಾಗದಲ್ಲಿ ದೇಶದ ವಿವಿಧ ಕಡೆಗಳಿಂದ ಆಗಮಿಸಿದ ಯತಿಗಳು, ಸ್ವಾಮಿಗಳು ಭಾಗವಹಿಸಿದ್ದರು. ರಾಯರ ಗುರುವೈಭವೋತ್ಸವ ಅಂಗವಾಗಿ ಮಹಾರುದ್ರ ಯಾಗವನ್ನು ಹಮ್ಮಿಕೊಳ್ಳಲಾಗಿದ್ದು, ಸೈನಿಕರಿಗೆ ಒಳಿತಾಗಲಿ ಎಂದು ಪ್ರಾರ್ಥಿಸಲಾಗುತ್ತಿದೆ. ಮಹಾರುದ್ರ ಯಾಗದಲ್ಲಿ ದೇಶದ ಮೂಲೆ ಮೂಲೆಯ ನೂರಾರು ಭಕ್ತರು ಭಾಗಿಯಾಗಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply