ದಾವಣಗೆರೆ| ಬೀದಿ ನಾಯಿ ದಾಳಿಯಿಂದ ರೇಬಿಸ್; 4 ತಿಂಗಳಿಂದ ಆಸ್ಪತ್ರೆಯಲ್ಲಿದ್ದ ಬಾಲಕಿ ಸಾವು

ದಾವಣಗೆರೆ: ಬೀದಿ ನಾಯಿ ದಾಳಿಗೆ ಒಳಗಾಗಿ ರೇಬಿಸ್ (Rabies) ಕಾಯಿಲೆಯಿಂದ 4 ತಿಂಗಳಿಂದ ಆಸ್ಪತ್ರೆಯಲ್ಲಿದ್ದ ಬಾಲಕಿ ಚಿಕಿತ್ಸೆ ಫಲಿಸದೇ ಮೃತಪಟ್ಟಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ದಾವಣಗೆರೆ (Davanagere) ನಗರದ ಶಾಸ್ತ್ರಿ ಲೇಔಟ್‌ನ ನಿವಾಸಿ ಮೊಹಮ್ಮದ್ ಶಾಕೀರ್ ಆಲಿ, ಅತೀಹಾ ಖಾನಂ ದಂಪತಿಯ ಮಗಳು ಖದೀರಾ ಬಾನು (4) ಮೃತ ಬಾಲಕಿ.

ಈಕೆ ಮೇಲೆ ಬೀದಿ ನಾಯಿಗಳ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದಳು. ಆಗ ಪೋಷಕರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಹೆಚ್ಚಿನ ಚಿಕಿತ್ಸೆಯನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಕೊಡಿಸಿ ಮನೆಗೆ ಕರೆತಂದಿದ್ದರು. ಆದರೆ ಒಂದು ತಿಂಗಳ ಹಿಂದೆ ಬಾಲಕಿ ವಾಂತಿ ಮಾಡಿಕೊಂಡು ಅಸ್ವಸ್ಥಳಾಗಿದ್ದಳು. ಗಾಬರಿಗೊಂಡ ಪೋಷಕರು ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲು ಮಾಡಿದ್ದು, ತಪಾಸಣೆ ನಡೆಸಿದ ವೈದ್ಯರು ಮಗುವಿಗೆ ರೇಬಿಸ್ ತಗಲಿರುವುದು ಪತ್ತೆಯಾಗಿದೆ. ಇದನ್ನೂ ಓದಿ: ಈ ದೇಶಗಳಲ್ಲಿ ಬೀದಿ ನಾಯಿಗಳಿಗೆ ಗ್ಯಾಸ್‌ ಚೇಂಬರ್‌, ದಯಾಮರಣ ಶಿಕ್ಷೆ – ಯಾವ ದೇಶದಲ್ಲಿ ಏನು ಕಾನೂನು?

ಕೂಡಲೇ ಐಸಿಯುನಲ್ಲಿ ಚಿಕಿತ್ಸೆ ನೀಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಮೃತಪಟ್ಟಿದ್ದಾಳೆ. ಪೋಷಕರು ಅಘಾತಕ್ಕೆ ಒಳಗಾಗಿದ್ದಾರೆ. ಇದ್ದ ಒಬ್ಬ ಮಗಳು ಈಗ ಬೀದಿ ನಾಯಿಗಳ ಹಾವಳಿಗೆ ಸಾವನ್ನಪ್ಪಿದ್ದಾಳೆಂದು ಕಣ್ಣೀರಿಟ್ಟಿದ್ದಾರೆ.

ಹಲವು ವರ್ಷಗಳಿಂದ ದಾವಣಗೆರೆಯಲ್ಲಿ ಬೀದಿ ನಾಯಿಗಳ ಹಾವಳಿಯನ್ನು ತಡೆಗಟ್ಟಲು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಮತ್ತೊಂದು ಮಗುವಿಗೆ ಈ ರೀತಿ ಆಗುವ ಮೊದಲೇ ಮುನ್ನೆಚ್ಚರಿಕೆ ವಹಿಸಿ ಎಂದು ಮೃತ ಮಗುವಿನ ತಂದೆ ಪಾಲಿಕೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ದಾವಣಗೆರೆಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಮಕ್ಕಳನ್ನು ಆಟವಾಡಲು ಹೊರಗೆ ಬಿಡಲು ಪೋಷಕರು ಭಯ ಪಡುವಂತಾಗಿದೆ. ರಾತ್ರಿ ಮನೆಯಿಂದ ಹೊರಬರಲು ಕಷ್ಟ ಎನ್ನುವಂತಹ ಪರಿಸ್ಥಿತಿ ಜಿಲ್ಲೆಯ ಅನೇಕ ಭಾಗಗಳಲ್ಲಿದೆ. ಇದನ್ನೂ ಓದಿ: ದೆಹಲಿಯಲ್ಲಿ ಬೀದಿ ನಾಯಿಗಳ ಹಾವಳಿ ಕೇಸ್‌ – ಹೊಸ ತ್ರಿಸದಸ್ಯ ಪೀಠ ರಚಿಸಿದ ಸಿಜೆಐ ಗವಾಯಿ