ಹೈದರಾಬಾದ್: ಸಾಮೂಹಿಕ ಸಂತಾನಹರಣ ಶಿಬಿರದ ಅಂಗವಾಗಿ ನಡೆಸಿದ್ದ ಕುಟುಂಬ ಯೋಜನೆ ಶಸ್ತ್ರಚಿಕಿತ್ಸೆಯಿಂದಾಗಿ ನಾಲ್ವರು ಮಹಿಳೆಯರು ಸಾವನ್ನಪ್ಪಿರುವ ಘಟನೆ ತೆಲಂಗಾಣದ ರಂಗಾ ರೆಡ್ಡಿ ಜಿಲ್ಲೆಯ ಇಬ್ರಾಹಿಂ ಪಟ್ಟಣದಲ್ಲಿ ನಡೆದಿದೆ.
ಆಗಸ್ಟ್ 24 ರಂದು ಇಬ್ರಾಹಿಂ ಪಟ್ಟಣದಲ್ಲಿ 34 ಮಹಿಳೆಯರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆಯಿಂದ ಉಂಟಾದ ವಿವಿಧ ತೊಡಕುಗಳಿಂದಾಗಿ ಹಲವರು ಅಸ್ವಸ್ಥರಾಗಿದ್ದರು. ಬಳಿಕ ಭಾನುವಾರ ಹಾಗೂ ಸೋಮವಾರ ಇಬ್ಬರು ಮಹಿಳೆಯರು ಹಾಗೂ ಮಂಗಳವಾರ ಇನ್ನಿಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ಇನ್ನು 7 ಮಹಿಳೆಯರನ್ನು ಉತ್ತಮ ಚಿಕಿತ್ಸೆಗಾಗಿ ಹೈದರಾಬಾದ್‌ಗೆ ಸ್ಥಳಾಂತರಿಸಲಾಗಿದೆ ಎಂದು ಸಾರ್ವಜನಿಕ ಆರೋಗ್ಯ ನಿರ್ದೇಶಕ ಜಿ ಶ್ರೀನಿವಾಸ್ ರಾವ್ ತಿಳಿಸಿದ್ದಾರೆ. ಇದನ್ನೂ ಓದಿ: ಅಪಘಾತದಲ್ಲಿ ಗಾಯಗೊಂಡಿದ್ದಾತ ಅಂಬುಲೆನ್ಸ್ ಬಾಗಿಲು ತೆಗೆಯೋಕಾಗದೆ ಸಾವನ್ನಪ್ಪಿದ!

ಘಟನೆಗೆ ಸಂಬಂಧಿಸಿದಂತೆ ಇಬ್ರಾಹಿಂ ಪಟ್ಟಣ ಸಿಹೆಚ್‌ಸಿಯ ವೈದ್ಯಕೀಯ ಅಧೀಕ್ಷಕರನ್ನು ಹಾಗೂ ಕುಟುಂಬ ಯೋಜನೆಯ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಿದರು.
ತೆಲಂಗಾಣ ಸರ್ಕಾರ ಸಾರ್ವಜನಿಕ ಆರೋಗ್ಯ ನಿರ್ದೇಶಕರ ನೇತೃತ್ವದ ಐವರು ಸದಸ್ಯರ ತಜ್ಞರ ಸಮಿತಿಯನ್ನು ರಚಿಸಿದ್ದು, ಆರೋಪ ಬಂದಿರುವ ಶಸ್ತ್ರಚಿಕಿತ್ಸೆಗಳ ಬಗ್ಗೆ ವಿಚಾರಣೆಯನ್ನು ನಡೆಸುತ್ತಿದೆ. ತಪ್ಪಿತಸ್ಥರೆಂದು ಸಾಬೀತಾದಲ್ಲಿ ವೈದ್ಯರ ಪರವಾನಗಿಯನ್ನು ರದ್ದುಗೊಳಿಸಲಾಗುವುದು ಎಂದು ರಾವ್ ತಿಳಿಸಿದ್ದಾರೆ. ಇದನ್ನೂ ಓದಿ: ಹದಗೆಟ್ಟ ರಸ್ತೆಯಿಂದ ಗ್ರಾಮಕ್ಕೆ ಬಾರದ ಅಂಬುಲೆನ್ಸ್- ಅರ್ಧ ಕಿ.ಮೀ ನಡೆದು ಬಂದ ತುಂಬುಗರ್ಭಿಣಿ
ತೆಲಂಗಾಣದಾದ್ಯಂತ ಪ್ರತಿ ತಿಂಗಳು ಇಂತಹ ಸಂತಾನಹರಣ ಶಿಬಿರಗಳನ್ನು ನಿಯಮಿತವಾಗಿ ನಡೆಸುವುದು ಸಾಮಾನ್ಯ. ಅನುಭವಿ ವೈದ್ಯರು ಡಬಲ್ ಪಂಕ್ಚರ್ ಲ್ಯಾಪರೊಸ್ಕೋಪಿ(ಡಿಪಿಎಲ್), ಟ್ಯೂಬೆಕ್ಟಮಿ ಮತ್ತು ವ್ಯಾಸೆಕ್ಟಮಿ ಶಸ್ತ್ರಚಿಕಿತ್ಸೆಗಳನ್ನು ಮಾಡುತ್ತಾರೆ. ತೀರಾ ಅಪರೂಪಕ್ಕೆ ಇಂತಹ ಘಟನೆಗಳು ನಡೆಯುತ್ತವೆ. ಆದರೆ ಈಗಿನ ಘಟನೆ ಬಗ್ಗೆ ನಿಖರವಾದ ಕಾರಣವನ್ನು ಹುಡುಕಿ ಬಹಿರಂಗಪಡಿಸುತ್ತೇವೆ ಎಂದರು.

Leave a Reply