ಆಲಮಟ್ಟಿಯಿಂದ 4 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ – ಛಾಯಾ ಭಗವತಿ ದೇವಸ್ಥಾನ ಮುಳುಗಡೆ

ವಿಜಯಪುರ: ಆಲಮಟ್ಟಿ ಜಲಾಶಯದಿಂದ 4 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ವಿಜಯಪುರ ಮುದ್ದೇಬಿಹಾಳ ತಾಲೂಕಿನ ಗಡಿ ಭಾಗದಲ್ಲಿ ಬರುವ ನಾರಾಯಣಪೂರ ಸಮೀಪದ ಛಾಯಾ ಭಗವತಿ ದೇವಸ್ಥಾನ ಸಂಪೂರ್ಣ ಜಲಾವೃತವಾಗಿದೆ.

ಜಲಾವೃತಗೊಂಡ ಕಾರಣ ಛಾಯಾ ಭಗವತಿಗೆ ದೇವಸ್ಥಾನದಲ್ಲಿ ಪೂಜೆ ಸ್ಥಗಿತಗೊಂಡಿದೆ. ಅಲ್ಲದೆ ಪೊಲೀಸರು ಪ್ರವಾಸಿಗರನ್ನು ಮೆಟ್ಟಿಲು ಬಳಿ ತೆರಳದಂತೆ ಕಣ್ಗಾವಲು ಇಟ್ಟಿದ್ದಾರೆ.

ಆಲಮಟ್ಟಿ ಜಲಾಶಯದ ಗರಿಷ್ಠ ಮಟ್ಟ 519.60 ಅಡಿ ಇದ್ದು, ಇಂದಿನ ಮಟ್ಟ 517.10 ಅಡಿಯಾಗಿದೆ. ಒಟ್ಟು 123.081 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಈಗ 87.737 ಟಿಎಂಸಿ ನೀರಿನ ಸಂಗ್ರಹವಿದೆ. ಆಲಮಟ್ಟಿ ಜಲಾಶಯದ ಒಳಹರಿವು 3,67,318 ಕ್ಯೂಸೆಕ್ ಇದ್ದರೆ, 3,90,929 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತದೆ.

ಇತ್ತ ಮಹಾರಾಷ್ಟ್ರದ ಉಜನಿ ಜಲಾಶಯದಿಂದ ನೀರು ಬಿಡುಗಡೆ ಮಾಡಿದ್ದರಿಂದ ಜಿಲ್ಲೆಯ ಅಲಮೇಲ ತಾಲೂಕಿನ ತಾರಾಪುರ ಗ್ರಾಮ ಸಂಪೂರ್ಣ ಜಲಾವೃತಗೊಂಡಿದೆ. ಇಂದು ಬೆಳಗ್ಗೆ ತಾರಾಪುರಕ್ಕೆ ತೆರಳುವ ರಸ್ತೆ ಹೊರ ಜಗತ್ತಿನಿಂದ ಸಂಪರ್ಕ ಕಳೆದುಕೊಂಡಿದೆ.

ಗ್ರಾಮದ ಸಂಪರ್ಕ ಸೇತುವೆ ಮೇಲೆ 4 ಅಡಿ ಅಷ್ಟು ನೀರು ನಿಂತಿದ್ದು, ಗ್ರಾಮಸ್ಥರು ವಾಹನಗಳು ಗ್ರಾಮದ ಹೊರಗಡೆ ನಿಲ್ಲಿಸಿದ್ದಾರೆ. ವಾಹನಗಳು ಗ್ರಾಮದ ಒಳಗೆ ಹೋಗಲು ಸಾಧ್ಯವಾಗದ ಕಾರಣ ಜನರು ನಡೆದುಕೊಂಡು ಗ್ರಾಮಕ್ಕೆ ತೆರಳುತ್ತಿದ್ದಾರೆ. ತಾರಾಪುರಕ್ಕೆ ತೆರಳುವ ರಸ್ತೆ ತಗ್ಗು ಪ್ರದೇಶದಲ್ಲಿ ಇರುವುದರಿಂದ ಗ್ರಾಮಕ್ಕೆ ತೆರಳುವ ಸಂಪರ್ಕ ರಸ್ತೆಯಲ್ಲಿ ನೀರು ಆವರಿಸುತ್ತಿದೆ.

Comments

Leave a Reply

Your email address will not be published. Required fields are marked *