ದರ್ಶನ್, ಯಶ್‍ಗೆ ನಾಲ್ಕು ದಿನ ರೆಸ್ಟ್- ಅಭಿಮಾನಿಗಳಿಗೆ ಜೆಡಿಎಸ್ ಚಾಲೆಂಜ್

ಮಂಡ್ಯ: ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಮಂಡ್ಯದಲ್ಲಿ ಕಳೆದ ನಾಲ್ಕು ದಿನದಿಂದ ಭರ್ಜರಿ ಪ್ರಚಾರ ನಡೆಸಿದ್ದ ದರ್ಶನ್ ಮತ್ತು ಯಶ್ ಇದೀಗ ಒಂದು ಸುತ್ತು ಪ್ರಚಾರ ಮುಗಿಸಿ ಬೆಂಗಳೂರಿಗೆ ತೆರಳಿದ್ದಾರೆ. ಇನ್ನು ನಾಲ್ಕೈದು ದಿನ ಈ ಜೋಡೆತ್ತುಗಳಿಗೆ ರೆಸ್ಟ್ ಸಿಗಲಿದೆ. ಇದು ಉಭಯ ನಾಯಕರ ಅಭಿಮಾನಿಗಳಲ್ಲಿ ನಿರಾಸೆ ತಂದ್ರೆ, ಇದೇ ವಿಷಯ ಇಟ್ಟುಕೊಂಡು ಜೆಡಿಎಸ್ ಕಾರ್ಯಕರ್ತರು ಹೊಸ ಸವಾಲು ಹಾಕಿದ್ದಾರೆ.

ಸಿಎಂ ಪುತ್ರ ನಿಖಿಲ್ ಎದುರು ಶತಾಯ ಗತಾಯ ಸುಮಲತಾ ಅಂಬರೀಶ್‍ರನ್ನು ಗೆಲ್ಲಿಸಲೇಬೇಕು ಎಂದು ಪಣ ತೊಟ್ಟಿರುವ ದರ್ಶನ್ ಮತ್ತು ಯಶ್ ಸುಮಲತಾ ಪರ ಮಂಡ್ಯದ ಹಲವೆಡೆ ಭರ್ಜರಿ ಪ್ರಚಾರ ನಡೆಸಿದರು. ಅವರು ಹೋದಲೆಲ್ಲ ಅಭಿಮಾನಿಗಳು ಸಾಗರದಂತೆ ಹರಿದು ಬಂದಿದ್ದರು. ಇದೀಗ ಒಂದು ಸುತ್ತು ಪ್ರಚಾರ ಮುಗಿಸಿರುವ ಇಬ್ಬರು ನಟರು ಇಂದಿನಿಂದ ನಾಲ್ಕೈದು ದಿನ ಮಂಡ್ಯ ಪ್ರಚಾರದಿಂದ ದೂರ ಉಳಿಯಲಿದ್ದಾರೆ.

ಆದರೆ ಇದೇ ವಿಷಯ ಇದೀಗ ಜೆಡಿಎಸ್ ಕಾರ್ಯಕರ್ತರ ಟೀಕೆಗೆ ಆಹಾರವಾಗಿದೆ. ಜೆಡಿಎಸ್ ಮುಖಂಡರು ಇಬ್ಬರು ನಟರ ಅಭಿಮಾನಿಗಳಿಗೆ ಹೊಸ ಸವಾಲು ಹಾಕಿದ್ದು, ಈ ಇಬ್ಬರು ನಟರನ್ನು ಈ ನಾಲ್ಕೈದು ದಿನದಲ್ಲಿ ನಿಮಗೆ ಬೇಕೆಂದಾಗ ಹೋಗಿ ಭೇಟಿ ಮಾಡಿ ನೋಡೋಣ ಎಂದು ಸವಾಲು ಹಾಕಿದ್ದಾರೆ.

ಸ್ಟಾರ್ ನಟರ ಸಿನಿಮಾ ನೋಡಿ ಚಪ್ಪಾಳೆ ಹೊಡೆಯೋದು ಸುಲಭ. ಚುನಾವಣೆ ಮುಗಿಸಿ ಒಮ್ಮೆ ಅವರು ಹೋದರೆ ಅವರನ್ನು ಭೇಟಿ ಮಾಡೋದು ಸುಲಭವಲ್ಲ. ಆದರೆ ನಿಖಿಲ್ ಪರ ಪ್ರಚಾರ ಮಾಡುತ್ತಿರುವ ಸ್ಥಳೀಯ ನಾಯಕರಾದ ಸಚಿವ ಪುಟ್ಟರಾಜು ಸೇರಿದಂತೆ ಇತರ ನಾಯಕರು ನಿಮಗೆ ಬೇಕೆಂದಾಗ ಕೈಗೆ ಸಿಗುತ್ತಾರೆ. ಇಂತಹ ನಾಯಕರಾದ ನಿಖಿಲ್ ಬೇಕೋ, ಸ್ಟಾರ್ ನಾಯಕರ ಸುಮಲತಾ ಬೇಕೋ ನೀವೇ ನಿರ್ಧರಿಸಿ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *