ಹರ್ಯಾಣ | ಇಟ್ಟಿಗೆ ಗೂಡು ಕುಸಿದು 4 ಮಕ್ಕಳ ದುರ್ಮರಣ

ಚಂಡೀಗಢ: ಹರ್ಯಾಣದ (Haryana) ಹಿಸ್ಸಾರ್‌ನ ಬುಡಾನಾ ಗ್ರಾಮದಲ್ಲಿ ಮಲಗಿದ್ದ ವೇಳೆ ಇಟ್ಟಿಗೆ ಗೂಡು (Brick Kiln) ಕುಸಿದು ನಾಲ್ವರು ಮಕ್ಕಳು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಓರ್ವ ಬಾಲಕಿ ತೀವ್ರವಾಗಿ ಗಾಯಗೊಂಡಿದ್ದಾಳೆ.

ಮೃತರನ್ನು ನಿಶಾ (3 ತಿಂಗಳು), ಸೂರಜ್ (9), ನಂದಿನಿ (5) ಮತ್ತು ವಿವೇಕ್ (9) ಎಂದು ಗುರುತಿಸಲಾಗಿದೆ. ನಾರ್ನಾಂಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ಈ ದುರ್ಘಟನೆ ನಡೆದಿದೆ.

ಮಕ್ಕಳು ಮತ್ತು ಕೆಲವು ಕಾರ್ಮಿಕರು ಇಟ್ಟಿಗೆ ಭಟ್ಟಿಯ ಗೋಡೆಯ ಬಳಿ ಮಲಗಿದ್ದಾಗ, ಗೋಡೆ ಅವರ ಮೇಲೆ ಕುಸಿದಿದೆ. ಪರಿಣಾಮ ಸೂರಜ್, ನಂದಿನಿ ಮತ್ತು ವಿವೇಕ್ ಸ್ಥಳದಲ್ಲೇ ಮೃತಪಟ್ಟರೆ, ನಿಶಾ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾಳೆ.

ಗೌರಿ (5) ಎಂಬ ಬಾಲಕಿಯ ಸ್ಥಿತಿ ಚಿಂತಾಜನಕವಾಗಿದೆ. ಆಕೆ ಹಿಸ್ಸಾರ್ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಎಲ್ಲಾ ಐವರು ಮಕ್ಕಳು ಉತ್ತರ ಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯ ಬಧವ್ ಗ್ರಾಮದವರು. ಉತ್ತರ ಪ್ರದೇಶದ (Uttar Pradesh) ಅನೇಕ ಕೂಲಿ ಕಾರ್ಮಿಕರು ಬುಡಾನಾದ ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ನಂತರ ಎಸ್ಪಿ ಮೀನಾ ಅವರು ಹಿಸ್ಸಾರ್ ಸಿವಿಲ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ಬಳಿಕ ಮಾಹಿತಿ ನೀಡಿ, ಸಂತ್ರಸ್ತರ ಕುಟುಂಬಗಳು ಈ ಬಗ್ಗೆ ಯಾವುದೇ ಲಿಖಿತ ದೂರು ನೀಡಿಲ್ಲ. ದೂರು ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.