4 ಲಕ್ಷ ಬಿಲ್ ಕೇಳಿದ್ದಕ್ಕೆ ಪತಿಯ ಮೃತದೇಹ ಬಿಟ್ಟು ಊರಿಗೆ ತೆರಳಿದ ಪತ್ನಿ..!

ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಎರಡನೇ ಅಲೆಯಿಂದ ಜನ ಕಂಗಾಲಾಗಿದ್ದಾರೆ. ಒಂದೆಡೆ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಪರದಾಡುತ್ತಿದ್ದರೆ, ಇನ್ನೊಂದೆಡೆ ಖಾಸಗಿ ಆಸ್ಪತ್ರೆಗಳ ಧನದಾಹಕ್ಕೆ ಜನ ನಲುಗಿ ಹೋಗಿದ್ದಾರೆ.

ಹೌದು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬಿಲ್ ಕಟ್ಟಲು ಆಗದೇ ಪತಿಯ ಮೃತದೇಹವನ್ನೇ ಪತ್ನಿ ಬಿಟ್ಟು ಹೋದ ಪ್ರಸಂಗ ನಡೆದಿದೆ. ಆಸ್ಪತ್ರೆಯ ಬಿಲ್ ಕಟ್ಟಿಲ್ಲ ಅಂತ ಮೃತದೇಹ ನೀಡಿಲ್ಲ ಎಂದು ಮೃತ ಸೋಂಕಿತನ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿಯೇ ಮೃತದೇಹವಿದೆ. ಆಸ್ಪತ್ರೆ ಸಿಬ್ಬಂದಿ 4 ಲಕ್ಷ ಬಿಲ್ ಕಟ್ಟುವಂತೆ ಹೇಳಿದ್ದಾರೆ. ಇದರಿಂದ ದಿಕ್ಕು ತೋಚದ ಮಹಿಳೆ, 4 ಲಕ್ಷ ಹಣ ಇಲ್ಲ, ನೀವೇ ಅಂತ್ಯಸಂಸ್ಕಾರ ಮಾಡಿ ಎಂದು ಹೇಳಿ ಊರಿಗೆ ತೆರಳಿದ್ದಾರೆ.

ನನ್ನ ತಂದೆಗೆ 4 ದಿನಗಳಿಂದ ಹುಷಾರು ಇರಲಿಲ್ಲ. ಸ್ವಲ್ಪ ಜ್ವರ ಕೆಮ್ಮು ಇತ್ತು. ನಂತರ ಕೊರೊನಾ ಚೆಕ್ ಮಾಡಿಸಿದ್ವಿ. ಆಗ ಕೊರೊನಾ ಪಾಸಿಟಿವ್ ಬಂತು. ಬಿಬಿಎಂಪಿಯವರಿಗೆ ಕಾಲ್ ಮಾಡಿದ್ವಿ. ಆದರೆ ಬಿಬಿಎಂಪಿಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ನಾವು ಮೊದಲು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಹೋದ್ವಿ. 1 ಗಂಟೆಯ ನಂತರ ಕಣ್ವ ಆಸ್ಪತ್ರೆಗೆ ಅಡ್ಮಿಟ್ ಮಾಡಿಸಿದ್ರು. ಮೊದಲಿಗೆ 50 ಸಾವಿರ ಅಡ್ವಾನ್ಸ್ ಹಣ ಕಟ್ಟಿ ಅಂದ್ರು. ನಮ್ಮ ಬಳಿ ಹಣ ಇರಲಿಲ್ಲ. ಹಾಗಾಗಿ 20 ಸಾವಿರ ಕಟ್ಟಿದ್ವಿ. ಕಣ್ವ ಆಸ್ಪತ್ರೆಯಲ್ಲಿ ಯಾವುದೇ ರೀತಿಯಲ್ಲಿ ಚಿಕಿತ್ಸೆ ನೀಡಲಿಲ್ಲ. ಇತ್ತ ತಂದೆ, ನನ್ನನ್ನ ಈ ಆಸ್ಪತ್ರೆಯಲ್ಲಿ ಇರಿಸಿದ್ರೆ ಸಾಯಿಸ್ತಾರೆ. ಬೇರೆ ಆಸ್ಪತ್ರೆಗೆ ಸೇರಿಸು ಎಂದು ವಿಡಿಯೋ ಕಾಲ್‍ನಲ್ಲಿ ಹೇಳಿದ್ರು. ಮೊದಲಿಗೆ ಶೇ.30ರಷ್ಟು ಸೋಂಕಿನಿಂದ ಗುಣಮುಖ ಆಗಿದ್ದಾರೆ ಅಂದ್ರು. ಆದಾಗಿ ಎರಡು ದಿನಗಳ ನಂತರ ಅಪ್ಪ ತೀರಿಕೊಂಡ್ರು ಎಂದು ಸೋಂಕಿತನ ಮಗಳು ಗಂಭೀರ ಆರೋಪ ಮಾಡಿದ್ದಾರೆ.

ಮೃತ ಸೋಂಕಿತನಿಗೆ 39 ವರ್ಷ ವಯಸ್ಸಾಗಿದ್ದು, ಮೂಲತಃ ವಿಜಯಪುರದವರಾಗಿದ್ದಾರೆ. ಐದು ವರ್ಷದಿಂದ ಬೆಂಗಳೂರಿನ ಬಾಡಿಗೆ ಮನೆಯಲ್ಲಿದ್ರು.

Comments

Leave a Reply

Your email address will not be published. Required fields are marked *