4 ದಿನದಲ್ಲಿ ಹಸೆಮಣೆ ಏರಬೇಕಿದ್ದ ಯುವಕ ನೇಣಿಗೆ ಶರಣು

– ಅರಿಶಿಣ ಶಾಸ್ತ್ರದ ದಿನವೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಕೋಲಾರ: ಕೇವಲ ನಾಲ್ಕು ದಿನದಲ್ಲಿ ಹಸೆಮಣೆ ಏರಬೇಕಿದ್ದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ತಾಲೂಕಿನ ಮಂಗಸಂದ್ರ ಗ್ರಾಮದಲ್ಲಿ ನಡೆದಿದೆ.

ಮಂಗಸಂದ್ರ ಗ್ರಾಮದ ಸತೀಶ್ (30) ನೇಣಿಗೆ ಶರಣಾದ ಯುವಕ. ಬುಧವಾರ ಹಿರಿಯರ ಸಮ್ಮುಖದಲ್ಲಿ ಅದೇ ಗ್ರಾಮದಲ್ಲಿಯೇ ಮದುವೆ ನಿಶ್ಚಯವಾಗಿತ್ತು. ಮನೆಯಲ್ಲಿ ಮದುವೆಯ ಸಂಭ್ರಮ ಕೂಡ ಮನೆ ಮಾಡಿತ್ತು. ಶುಕ್ರವಾರ ಮದುವೆ ಮನೆಯಲ್ಲಿ ಅರಿಶಿಣ ಶಾಸ್ತ್ರ ನಡೆಯಬೇಕಿತ್ತು. ಆದರೆ ಆ ದಿನವೇ ಸತೀಶ್ ಮರವೊಂದಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಮೃತ ಸತೀಶ್ ಪದವಿ ಮುಗಿಸಿದ್ದು, ಕೋಲಾರದ ಉತ್ತರ ವಿಶ್ವವಿದ್ಯಾಲಯದಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದ. ಮದುವೆಗಾಗಿ ಮನೆಯಲ್ಲಿ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಕೊರೊನಾ ಇರುವುದರಿಂದ ಸಿಂಪಲ್ ಆಗಿ ಮನೆಯ ಬಳಿ ಹತ್ತಿರದವರನ್ನು ಕರೆದು ಮದುವೆ ಮಾಡಬೇಕೆಂದು ನಿರ್ಧಾರ ಮಾಡಿದ್ದರು. ಎಂದಿನಂತೆ ಗುರುವಾರ ಕೆಲಸಕ್ಕೆ ಹೋಗಿದ್ದ ಸತೀಶ್, ಕತ್ತಲೆಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಮನೆಯವರು ಫೋನ್ ಮಾಡಿದ್ದಾರೆ. ಆಗ ಸತೀಶ್ ಬೆಂಗಳೂರಿನಲ್ಲಿ ಇರೋದಾಗಿ ಹೇಳಿದ್ದನು. ರಾತ್ರಿ ಸುಮಾರು 10 ಗಂಟೆಗೆ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದ.

ಗುರುವಾರ ರಾತ್ರಿ ಪೂರ್ತಿ ಮನೆಯವರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಆದರೆ ಶುಕ್ರವಾರ ಬೆಳಗ್ಗೆ ಗ್ರಾಮದ ಹೊರವಲಯ ತಮ್ಮ ಜಮೀನು ಬಳಿ ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಜಮೀನಿನ ಪಕ್ಕದಲ್ಲಿ ಬೈಕ್ ನಿಲ್ಲಿಸಿ, ಅಲ್ಲೇ ಇದ್ದ ಮರವೊಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಗನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಸದ್ಯಕ್ಕೆ ಸತೀಶ್ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ಸತೀಶ್‍ಗೆ ಮದುವೆ ಇಷ್ಟವಿರಲಿಲ್ಲ ಅದಕ್ಕೆ ಹೀಗೆ ಮಾಡಿಕೊಂಡಿರಬೇಕು ಎಂಬ ಮಾತು ಗ್ರಾಮದಲ್ಲಿ ಕೇಳಿಬರುತ್ತಿತ್ತು. ವಿಷಯ ತಿಳಿದು ಪ್ರಕರಣ ದಾಖಲಿಸಿಕೊಂಡಿರುವ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Comments

Leave a Reply

Your email address will not be published. Required fields are marked *