ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಸಾವಿನ ಸರಣಿ ಮುಂದುವರಿದಿದ್ದು, ಇಂದು 37 ವರ್ಷದ ಮಹಿಳೆ ಸೇರಿ ಐವರು ಕೊರೊನಾಗೆ ಬಲಿಯಾಗಿದ್ದಾರೆ. ಇದರೊಂದಿಗೆ ಸಾವನ್ನಪ್ಪಿದವರ ಸಂಖ್ಯೆ 142ಕ್ಕೇರಿದೆ.
ಮೃತರಲ್ಲಿ ಮೂವರು ಬೆಂಗಳೂರಿನ ನಿವಾಸಿಗಳಾಗಿದ್ದು, ಇದರೊಂದಿಗೆ ನಗರದಲ್ಲಿ ಸಾವಿನ ಸಂಖ್ಯೆ 67ಕ್ಕೇರಿದೆ. ರಾಜ್ಯದ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ 80 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರು ನಗರವೊಂದರಲ್ಲೇ 38 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರದಲ್ಲಿ ಸಾವಿನ ಸಂಖ್ಯೆ ಮಾತ್ರವಲ್ಲದೇ ಸೋಂಕಿತರ ಸಂಖ್ಯೆಯೂ ಹೆಚ್ಚಳವಾಗಿದ್ದು, ಇಂದು 126 ಹೊಸ ಕೋವಿಡ್ ಪ್ರಕರಣಗಳು ದೃಢವಾಗಿದ್ದು, ಸೋಂಕಿತರ ಸಂಖ್ಯೆ 1,398ಕ್ಕೇರಿದೆ.

ಸಾವನ್ನಪ್ಪಿದವರ ವಿವರ:
ರೋಗಿ ಸಂಖ್ಯೆ-7,732, 60 ವರ್ಷದ ಮಹಿಳೆ ಬಳ್ಳಾರಿ ನಿವಾಸಿಯಾಗಿದ್ದು, ವಿಷಮ ಶೀತ ಜ್ವರದಿಂದ (ಐಎಲ್‍ಐ) ಮತ್ತು ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದರು. ಜ್ವರ, ಕೆಮ್ಮು ಮತ್ತು ಉಸಿರಾಟದ ಸಮಸ್ಯೆಯಿಂದ ಅವರನ್ನು ಜೂ.17 ರಂದು ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೂನ್ 22 ರಂದು ಚಿಕಿತ್ಸೆ ಫಲಿಸದೆ ಮಹಿಳೆ ಸಾವನ್ನಪ್ಪಿದ್ದಾರೆ.
ರೋಗಿ ಸಂಖ್ಯೆ-9,237, 90 ವರ್ಷದ ವೃದ್ಧ, ರಾಮನಗರದ ನಿವಾಸಿ. ಜೂನ್ 20 ತಮ್ಮ ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ನಿವಾಸದಲ್ಲೇ ಸಾವನ್ನಪ್ಪಿದ್ದರು. ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದ ಇವರಿಗೆ ಯಾವುದೇ ಕೊರೊನಾ ಲಕ್ಷಣಗಳು ಕಂಡುಬಂದಿರಲಿಲ್ಲ.

ರೋಗಿ ಸಂಖ್ಯೆ-9,276, 45 ವರ್ಷದ ಪುರುಷ, ಬೆಂಗಳೂರು ನಿವಾಸಿಯಾಗಿದ್ದು, ಉಸಿರಾಟದ ಸಮಸ್ಯೆಯಿಂದ ಜೂನ್ 12 ರಂದು ನಿಗದಿತ ಆಸ್ಪತ್ರೆಗೆ ದಾಖಲಾಗಿದ್ದರು. ಜ್ವರ, ಕೆಮ್ಮು ಮತ್ತು ಉಸಿರಾಟದ ಸಮಸ್ಯೆಯೊಂದಿಗೆ ಅಸ್ತಮಾ (ಟಿಬಿ) ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಜೂನ್ 15 ರಂದು ಸಾವನ್ನಪ್ಪಿದ್ದರು.
ರೋಗಿ ಸಂಖ್ಯೆ-9,299, 38 ವರ್ಷದ ಮಹಿಳೆ ಬೆಂಗಳುರು ನಗರ ನಿವಾಸಿಯಾಗಿದ್ದು, ಉಸಿರಾಟದ ಸಮಸ್ಯೆ (ಸಾರಿ)ಯಿಂದ ಬಳಲುತ್ತಿದ್ದರು. ಜೂನ್ 16 ರಂದು ನಿಗದಿತ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಜೂನ್ 17 ರಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು.
ರೋಗಿ ಸಂಖ್ಯೆ-9,362, 70 ವರ್ಷದ ವೃದ್ಧ ಬೆಂಗಳೂರಿನ ನಿವಾಸಿಯಾಗಿದ್ದು, ಉಸಿರಾಟಸ ಸಮಸ್ಯೆ (ಸಾರಿ)ಯಿಂದ ಬಳಲುತ್ತಿದ್ದರು. ಜೂನ್ 20 ರಂದು ಜ್ವರ, ಕೆಮ್ಮು ಮತ್ತು ಹೃದಯ ಸಂಬಂಧಿ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದು, ಅಂದೇ ಸಾವನ್ನಪ್ಪಿದ್ದರು.

Leave a Reply