ಸರ್ಕಾರಿ ಬಸ್ ಮುಖಾಮುಖಿ ಡಿಕ್ಕಿ- ಚಾಲಕ, ಮೂವರು ಶಿಕ್ಷಕಿಯರು ಸೇರಿ ನಾಲ್ವರ ದುರ್ಮರಣ

ಕಲಬುರಗಿ: ಸರ್ಕಾರಿ ಬಸ್ ಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಮೂವರು ಶಿಕ್ಷಕಿಯರು, ಚಾಲಕ ಸೇರಿ ಒಟ್ಟು ನಾಲ್ವರು ದುರ್ಮರಣಕ್ಕೀಡಾದ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಜೇವರ್ಗಿ ತಾಲೂಕು ಕ್ರಿಡಾಂಗಣದ ಬಳಿ ಇಂದು ಬೆಳಗ್ಗೆ ಈ ಅವಘಡ ಸಂಭವಿಸಿದೆ. ಮೃತ ದುರ್ದೈವಿಗಳನ್ನು ಚಿಗರತಿಹಳ್ಳಿ ಸರ್ಕಾರಿ ಶಾಲಾ ಶಿಕ್ಷಕಿ ಆಯೇಷಾ ಸಿದ್ದಿಕಿ, ಫರೀನ್ ಬೇಗಂ ಹಾಗೂ ಯಾಳವಾರ ಸರ್ಕಾರಿ ಶಾಲೆಯ ಸಹರಾ ಕಲತೂನ್  ಹಾಗೂ ಚಾಲಕನನ್ನು 45 ವರ್ಷದ ರುಕ್ಕಯ್ಯ ಎಂದು ಗುರುತಿಸಲಾಗಿದೆ.

ಘಟನೆಯಲ್ಲಿ ಹತ್ತಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಸದ್ಯ ಗಾಯಾಳುಗಳನ್ನು ಜೇವರ್ಗಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಲಬುರಗಿಯಿಂದ ದಾವಣಗೆರೆ ಕಡೆ ಚಲಿಸುತ್ತಿದ್ದ ಬಸ್ ಚಾಲಕನಿಗೆ ಓವರ್ ಟೈಂ ಡ್ಯೂಟಿಗೆ ಹಾಕಿದ್ದ ಪರಿಣಾಮ ಈ ಅವಘಡ ಸಂಭವಿಸಿದೆ ಅಂತ ಹೇಳಲಾಗುತ್ತಿದೆ.

ಕಲಬುರಗಿಯಿಂದ ದಾವಣಗೆರೆ ಹಾಗೂ ಯಾದಗಿರಿ ಜಿಲ್ಲೆಯ ಶಹಾಪೂರನಿಂದ ಕಲಬುರಗಿಗೆ ಬರುತ್ತಿದ್ದ ಬಸ್ ಗಳ ಮಧ್ಯೆ ಈ ಅಪಘಾತ ಸಂಭವಿಸಿದೆ. ಒಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಬಸ್ ಚಾಲಕರಿಗೆ ಓವರ್ ಟೈಂ ಡ್ಯೂಟಿಗೆ ಹಾಕುವುದರಿಂದಲೇ ಪದೇ ಪದೇ ಇಂತಹ ಅವಘಡಗಳ ಸಂಭವಿಸುತ್ತಿದೆ ಅಂತ ಅಲ್ಲಿನ ಸಿಬ್ಬಂದಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

ಈ ಸಂಬಂಧ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *