3 ಫಾರಿನ್ ಪ್ರವಾಸಿಗರಿಗೆ ಅಪಘಾತ- ಚಿಕಿತ್ಸೆ ಕೊಡಿಸಿ, ಮನೆಯಲ್ಲಿ ಊಟ ನೀಡಿ ಆತಿಥ್ಯ ತೋರಿದ ಶಿಡ್ಲಘಟ್ಟ ಜನ

ಚಿಕ್ಕಬಳ್ಳಾಪುರ: ವಿವಿಧತೆಯಲ್ಲಿ ಏಕತೆ ಹೊಂದಿರುವ ಭಾರತ ದೇಶದ ಮೂಲಮಂತ್ರ ಅತಿಥಿ ದೇವೋಭವ. ಶತ್ರುಗಳಿಗೂ ಒಳ್ಳೆಯದನ್ನು ಬಯಸುವ ಸ್ವಭಾವ ಭಾರತೀಯರದ್ದು. ಇಲ್ಲಿಗೆ ಬಂದ ಮೂವರು ಪ್ರವಾಸಿಗರು ಸಂಕಷ್ಟದಲ್ಲಿದ್ದಾಗ ಸ್ಪಂದಿಸಿ, ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿದ್ದಾರೆ.

ಭಾರತಕ್ಕೆ ಪ್ರತಿವರ್ಷ ಏನಿಲ್ಲ ಅಂದ್ರೂ 30 ರಿಂದ 40 ಲಕ್ಷ ವಿದೇಶಿಗರು ಪ್ರವಾಸಕ್ಕೆ ಅಂತಾನೇ ಬರ್ತಾರೆ. ಹೀಗೆ ಪ್ರವಾಸಕ್ಕೆ ಅಂತ ಬಂದಿದ್ದ ಲಂಡನ್ ಮತ್ತು ಫ್ರಾನ್ಸ್ ಮೂಲದ ಮೂವರು ವಿದೇಶಿಗರು ಕೇರಳ ಟ್ರಿಪ್ ಮುಗಿಸಿ ಮೈಸೂರು, ಬೆಂಗಳೂರು ನೋಡ್ಕೊಂಡು ಗುರುವಾರದಂದು ಚಿಕ್ಕಬಳ್ಳಾಪುರ ಮಾರ್ಗವಾಗಿ ತಿರುಪತಿಗೆ ಹೊರಟಿದ್ರು.

ಆಟೋದಲ್ಲಿ ಹೋಗ್ತಿದ್ದಾಗ ಬೈಕ್ ಅಚಾನಕ್ ಆಗಿ ಅಡ್ಡ ಬಂತು. ಅಪಘಾತ ತಪ್ಪಿಸಲು ಹೋಗಿ ಆಟೋ ಪಲ್ಟಿಯಾಗಿ ಲಂಡನ್ ಮೂಲದ ಫ್ರೆಡ್, ಟಾಯ್, ಹಾಗು ಫ್ರಾನ್ಸ್ ಮೂಲದ ಫೀಬಿ ಗಾಯಗೊಂಡಿದ್ರು.

ಅಪಘಾತ ಆಗ್ತಿದ್ದಂತೆ ಶಿಡ್ಲಘಟ್ಟದ ಜನ ವಿದೇಶಿಗರನ್ನ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆಸ್ಪತ್ರೆಯವರು ಉಚಿತವಾಗೇ ಟ್ರೀಟ್‍ಮೆಂಟ್ ಕೊಟ್ಟಿದ್ದರೆ. ಹಸಿವಿನಿಂದ ಇದ್ದವರಿಗೆ ಇಲ್ಲಿನ ಜನ ಮನೆಗೆ ಕರ್ಕೊಂಡು ಹೋಗಿ ಆತಿಥ್ಯ ಕೊಟ್ಟಿದ್ದಾರೆ.ಅಕ್ಕಪಕ್ಕದ ಜನರೆಲ್ಲಾ ಬಂದು ಹೂವು ಕೊಟ್ಟು ಶುಭ ಕೋರಿ, ವಿದೇಶಿ ಮಹಿಳೆಯ ಕೈಗೆ ಮೆಹಂದಿ ಹಾಕಿ ನಮ್ಮ ಸಂಸ್ಕೃತಿ ಪರಿಚಯ ಮಾಡಿಕೊಟ್ಟಿದ್ದಾರೆ

ಕನ್ನಡಿಗರ ಆತಿಥ್ಯ ಸ್ವೀಕರಿಸಿದ ವಿದೇಶಿಗರು ಕೂಡ ತುಂಬಾ ಖುಷಿಪಟ್ಟಿದ್ದಾರೆ. ಇದೀಗ ಈ ಮೂವರು ವಿದೇಶಿ ಪ್ರವಾಸಿಗರು ಚೇತರಿಸಿಕೊಂಡು ಪ್ರವಾಸ ಮುಂದುವರೆಸಿದ್ದಾರೆ.

Comments

Leave a Reply

Your email address will not be published. Required fields are marked *