ಮಾಧ್ಯಮಗಳ ಎದುರು ನಕಲಿ ಎನ್‌ಕೌಂಟರ್‌ ಆರೋಪ ಮಾಡಿದ ಬಿಷ್ಣೋಯ್ ಗ್ಯಾಂಗ್‌ನ ಶೂಟರ್‌!

– ವಶದಲ್ಲಿರುವಾಗಲೇ ಮಾಧ್ಯಮಗಳಿಗೆ ಹೇಳಿಕೆ – 3 ಪೊಲೀಸರು ಸಸ್ಪೆಂಡ್‌

ಲಕ್ನೋ: ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ (Lawrence Bishnoi ) ಶಾರ್ಪ್ ಶೂಟರ್ ಯೋಗೇಶ್‌ ಪೊಲೀಸರ ವಶದಲ್ಲಿರುವಾಗಲೇ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾನೆ. ಈ ವೀಡಿಯೋ ವೈರಲ್ ಆದ ಬೆನ್ನಲ್ಲೇ ಮಥುರಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶೈಲೇಶ್ ಪಾಂಡೆಯವರು ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದಾರೆ.

ಶಾರ್ಪ್‌ಶೂಟರ್ ರಿಫೈನರಿ ಪೊಲೀಸ್ ಠಾಣೆಯಲ್ಲಿ ಪೊಲೀಸ್ ವಶದಲ್ಲಿರುವಾಗ ಸ್ಥಳೀಯ ಮಾಧ್ಯಮ ಸಿಬ್ಬಂದಿಯೊಂದಿಗೆ ಮಾತನಾಡಿದ್ದಾನೆ. ಈ ವೇಳೆ ಮಥುರಾದಲ್ಲಿ ಆತನ ಮೇಲೆ ನಡೆದ ಎನ್‌ಕೌಂಟರ್ ನಕಲಿ ಎಂದು ಯೋಗೇಶ್ ಹೇಳಿದ್ದ. ಅಲ್ಲದೇ ಮಹಾರಾಷ್ಟ್ರ ಮಾಜಿ ಸಚಿವ ಬಾಬಾ ಸಿದ್ದಿಕಿ (Baba Siddique) ಹತ್ಯೆ ವಿಚಾರವಾಗಿ, ಅವರು ಒಳ್ಳೆಯ ವ್ಯಕ್ತಿಯಲ್ಲ ಮತ್ತು ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ ಜೊತೆ ಸಂಪರ್ಕ ಹೊಂದಿದ್ದರು ಎಂದು ಹೇಳಿದ್ದ. ಈ ವೀಡಿಯೋ ವೈರಲ್‌ ಆಗಿತ್ತು.

ಈ ಸಂಬಂಧ ರಿಫೈನರಿ ಪೊಲೀಸ್ ಠಾಣೆಯಲ್ಲಿ ನಿಯೋಜನೆಗೊಂಡಿದ್ದ ಸಬ್ ಇನ್ಸ್‌ಪೆಕ್ಟರ್ ರಾಮ್ಸನೇಹಿ, ಹೆಡ್ ಕಾನ್‌ಸ್ಟೆಬಲ್ ವಿಪಿನ್ ಮತ್ತು ಕಾನ್‌ಸ್ಟೆಬಲ್ ಸಂಜಯ್ ಅವರನ್ನು ಅಮಾನತುಗೊಳಿಸಿಸಲಾಗಿದೆ.

ದೆಹಲಿಯಲ್ಲಿ ನಡೆದಿದ್ದ ಜಿಮ್ ಮಾಲೀಕನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಯೋಗೇಶ್‌ನನ್ನು ದೆಹಲಿ ವಿಶೇಷ ಘಟಕ ಮತ್ತು ಮಥುರಾ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಗುರುವಾರ ಬಂಧಿಸಿದ್ದರು. ಬಂದನದ ವೇಳೆ ಪೊಲೀಸರು ನಡೆಸಿದ್ದ ಎನ್‌ಕೌಂಟರ್‌ನಲ್ಲಿ ಆತ ಗಾಯಗೊಂಡಿದ್ದ.

ಜಿಮ್ ಮಾಲೀಕ ನಾದಿರ್ ಶಾನನ್ನು ಸೆಪ್ಟೆಂಬರ್ 12 ರಂದು ದಕ್ಷಿಣ ದೆಹಲಿಯಲ್ಲಿ ಸಾರ್ವಜನಿಕರ ಎದುರೇ ಗುಂಡಿಕ್ಕಿ ಹತ್ಯೆಗೈಯ್ಯಲಾಗಿತ್ತು.