ಚಿನ್ನಸ್ವಾಮಿ ಬಾಂಬ್ ಸ್ಫೋಟ ಪ್ರಕರಣ- ಮೂವರಿಗೆ 7 ವರ್ಷ ಜೈಲು ಶಿಕ್ಷೆ

ಬೆಂಗಳೂರು: ಐಪಿಎಲ್ ಪಂದ್ಯಾವಳಿ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಕಾಂಪೌಡ್ ನಲ್ಲಿ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ದೋಷಿಗಳಿಗೆ ಎನ್‍ಐಎ ವಿಶೇಷ ನ್ಯಾಯಾಲಯ ಸೋಮವಾರ 7 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶ ಸಿದ್ದಲಿಂಗ ಪ್ರಭು ರವರು ಇಂದು ತಪ್ಪೊಪ್ಪಿಕೊಂಡ ಮೂವರು ದೋಷಿಗಳಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ. ಕಳೆದ ಬುಧವಾರ ಸ್ಫೋಟ ಪ್ರಕರಣದ 5ನೇ ಆರೋಪಿಯಾಗಿರುವ ಗೌಹಾರ್ ಅಜೀಜ್ ಖೋಮೆನಿ, 12ನೇ ಆರೋಪಿ ಕಮಲ್ ಹಸನ್ ಅಲಿಯಾಸ್ ಕಮಲ್ ಹಾಗೂ 13ನೇ ಆರೋಪಿ ಮೊಹಮ್ಮದ್ ಕಫೀಲ್ ಅಖ್ತರ್ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದರು. ಉಳಿದ ಆರೋಪಿಗಳ ಬಗ್ಗೆ ತನಿಖೆ ಮುಂದುವರಿದಿದ್ದು, ಉಗ್ರ ಯಾಸಿನ್ ಭಟ್ಕಳ್ ಸೇರಿದಂತೆ ಒಟ್ಟು 14 ಉಗ್ರರು ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.

2010ರ ಏಪ್ರಿಲ್ 17ರಂದು ಐಪಿಎಲ್ ಪಂದ್ಯ ಆರಂಭಕ್ಕೆ ಮುನ್ನ ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತ ಮೂರು ಬಾಂಬ್ ಸ್ಫೋಟಗೊಂಡಿದ್ದವು. ಘಟನೆಯಲ್ಲಿ ಪೊಲೀಸರು ಸೇರಿದಂತೆ 15 ಜನ ಗಾಯಗೊಂಡಿದ್ದರು. ಇದೇ ವೇಳೆ ಸ್ಫೋಟಗೊಳ್ಳದ ಎರಡು ಬಾಂಬ್‍ಗಳು ಸ್ಥಳದಲ್ಲಿ ಪತ್ತೆಯಾಗಿತ್ತು.

Comments

Leave a Reply

Your email address will not be published. Required fields are marked *