3 ನಾಯಿಗಳೊಂದಿಗೆ ವಾಕ್‍ಗೆ ಹೋಗಿದ್ದ ಹುಡುಗಿ ನಾಪತ್ತೆ- 4 ದಿನದ ನಂತ್ರ ಪೊದೆಯಲ್ಲಿ ಪತ್ತೆ

– ಮನೆಯ ಸಮೀಪದ ಪೊದೆಯಲ್ಲಿ 16ರ ಹುಡುಗಿ ಪತ್ತೆ

ಹೈದರಾಬಾದ್: 16 ವರ್ಷದ ಹುಡುಗಿಯೊಬ್ಬಳು ತನ್ನ ಮನೆಯಿಂದ ಹೊರ ಹೋಗಿದ್ದ ನಾಲ್ಕು ದಿನಗಳ ನಂತರ ಸುರಕ್ಷಿತವಾಗಿ ಮನೆಗೆ ವಾಪಸ್ ಬಂದಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಲಾರಾ ರವಿಕುಮಾರ್ ಭಾನುವಾರ ಸಂಜೆ 7 ಗಂಟೆಗೆ ಸುರಕ್ಷಿತವಾಗಿ ಮನೆಗೆ ವಾಪಾಸ್ ಬಂದಿದ್ದಾಳೆ. ಹುಡುಗಿ ಹೆಚ್ಚಾಗಿ ಮೊಬೈಲ್ ಫೋನ್ ಬಳಸುತ್ತಿದ್ದಳು. ಹೀಗಾಗಿ ಆಕೆಯ ತಂದೆ ಬೈದಿದ್ದಾರೆ. ಹುಡುಗಿ ತಂದೆಯ ಜೊತೆ ಜಗಳ ಮಾಡಿದ ನಂತರ ಅ.7 ರಂದು ವಾಕ್ ಮಾಡಲು ಮನೆಯಿಂದ ಹೋಗಿದ್ದಳು. ಆದರೆ ತುಂಬಾ ಸಮಯವಾದರೂ ವಾಪಸ್ ಬಂದಿರಲಿಲ್ಲ. ಇದೀಗ ನಾಲ್ಕು ದಿನಗಳ ನಂತರ ಲಾರಾ ಮನೆಗೆ ವಾಪಸ್ ಬಂದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಪ್ರಕರಣ?
ಹಯಾತ್‍ನಗರ ನಿವಾಸಿಯಾಗಿದ್ದ ಲಾರಾ 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಹೆಚ್ಚಾಗಿ ಫೋನ್ ಬಳಸುತ್ತಿದ್ದಕ್ಕೆ ತಂದೆ ಬೈದಿದ್ದಾರೆ. ಆಗ ತಂದೆ-ಮಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಅಕ್ಟೋಬರ್ 7ರಂದು ರಾತ್ರಿ ಊಟ ಮಾಡಿ ಲಾರಾ ತನ್ನ ಮೂರು ನಾಯಿಗಳೊಂದಿಗೆ ವಾಕ್ ಮಾಡಲು ಮನೆಯಿಂದ ಹೊರ ಹೋಗಿದ್ದಾಳೆ. ಅವಳು ವಾಕಿಂಗ್‍ಗೆ ಹೋದ 10 ನಿಮಿಷಗಳ ನಂತರ ಲಾರಾ ಕಾಣೆಯಾಗಿದ್ದನ್ನು ಕುಟುಂಬ ಗಮನಿಸಿದೆ.

ತನ್ನ ಮನೆಯಿಂದ ಹೊರಡುವ ಸಮಯದಲ್ಲಿ ಲಾರಾ ತನ್ನ ಫೋನ್, ಪರ್ಸ್ ಯಾವುದನ್ನೂ ತೆಗೆದುಕೊಂಡು ಹೋಗಿರಲಿಲ್ಲ. ಹೀಗಾಗಿ ಪೋಷಕರು ಎಲ್ಲಾ ಕಡೆ ಹುಡುಕಾಡಿದ್ದಾರೆ. ಆದರೆ ಎಲ್ಲೂ ಪತ್ತೆಯಾಗಿರಲಿಲ್ಲ. ಕೊನೆಗೆ ಪೊಲೀಸ್ ಠಾಣೆಗೆ ಹೋಗಿ ನಾಪತ್ತೆ ದೂರು ದಾಖಲಿಸಿದ್ದಾರೆ. ಅಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ಕೂಡ ಮಗಳನ್ನು ಪತ್ತೆ ಹಚ್ಚಲು ಪೋಷಕರು ಸಹಾಯ ಕೇಳಿದ್ದರು. ಕೂಡಲೇ ಪೊಲೀಸರು ಆ ಪ್ರದೇಶದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದ್ದಾರೆ.

ನಿರಂತರವಾಗಿ ನಾಲ್ಕು ದಿನಗಳ ಕಾಲ ಹುಡುಗಿಯನ್ನು ಪತ್ತೆಹಚ್ಚಲು ಪೊಲೀಸರು ಸುತ್ತಮುತ್ತಲಿನ ಪ್ರದೇಶಗಳಿಂದ 100 ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದ್ದಾರೆ. ಆದರೆ ಲಾರಾ ಮಾತ್ರ ಎಲ್ಲೂ ಪತ್ತೆಯಾಗಿರಲಿಲ್ಲ. ಆದರೆ ಹಯಾತ್‍ನಗರ ಪೊಲೀಸ್ ವ್ಯಾಪ್ತಿಯಲ್ಲಿ ಲಾರಾ ನಮ್ಮ ಮನೆಯ ಸಮೀಪ ಪೊದೆಗಳ ನಡುವೆ ಅಡಗಿಕೊಂಡಿದ್ದಳು ಎಂದು ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಲಾರಾ ಭಾನುವಾರ ಸಂಜೆ 7 ಗಂಟೆಗೆ ಮನೆಗೆ ಹಿಂದಿರುಗಿದ್ದಾಳೆ. ಅವಳು ಸುರಕ್ಷಿತವಾಗಿ ವಾಪಸ್ ಮನೆಗೆ ಬಂದಿದ್ದಾಳೆ. ಆದರೆ ಸ್ವಲ್ಪ ವೀಕ್ ಆಗಿದ್ದಾಳೆ. ಹೀಗಾಗಿ ಇನ್ನೂ ಆಕೆಯ ಹೇಳಿಕೆಯನ್ನು ಪಡೆದುಕೊಂಡಿಲ್ಲ. ನಾಪತ್ತೆಯಾದ ಮಗಳಿಗಾಗಿ ಪೋಷಕರು ಸೋಶಿಯಲ್ ಮೀಡಿಯಾದ ಮೂಲಕ ಸಹಾಯ ಮಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದರು. ಹೀಗಾಗಿ ಹುಡುಗಿ ವಾಪಸ್ ಮನೆಗೆ ಬಂದ ತಕ್ಷಣ ಪೋಷಕರು ಎಲ್ಲರಿಗೂ ಮಾಹಿತಿ ನೀಡಿದ್ದಾರೆ ಎಂದು ಇನ್ಸ್‌ಪೆಕ್ಟರ್ ಎಸ್.ಸುರೇಂದರ್ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *