3 ತಿಂಗಳ ಹಿಂದಷ್ಟೇ ಮದ್ವೆಯಾದ ನವ ವಿವಾಹಿತೆ ಆತ್ಮಹತ್ಯೆಗೆ ಯತ್ನ

ಶಿವಮೊಗ್ಗ: ನವ ವಿವಾಹಿತೆಯೋರ್ವಳು ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಬಾರಂದೂರಿನಲ್ಲಿ ನಡೆದಿದೆ.

ಕಳೆದ 3 ತಿಂಗಳ ಹಿಂದೆಯಷ್ಟೇ ಶಿವಮೊಗ್ಗದ ದುರ್ಗಿಗುಡಿ ನಿವಾಸಿ ಮಹಿಳೆ ಹಾಗೂ ಬಾರಂದೂರಿನ ಬಸವರಾಜ್ ಇಬ್ಬರು ವಿವಾಹವಾಗಿದ್ದರು. ವಿವಾಹಿತೆಯ ಹೆತ್ತವರು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದರೂ ಗಂಡನ ಮನೆಯಲ್ಲಿ ಮಗಳು ಚೆನ್ನಾಗಿರಲಿ ಎಂಬ ಕಾರಣದಿಂದ ಚಿನ್ನ ಹಾಗೂ ಬೆಳ್ಳಿ ಆಭರಣವನ್ನು ವರದಕ್ಷಿಣೆ ನೀಡಿ ವಿವಾಹ ಮಾಡಿಕೊಟ್ಟಿದ್ದರು. ಆದರೆ ವಿವಾಹವಾದ ಒಂದೇ ವಾರಕ್ಕೆ ಗಂಡನ ಮನೆಯವರು ಈಕೆಗೆ ಕಿರುಕುಳ ನೀಡಲು ಆರಂಭಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಈಕೆಯ ಗಂಡನ ತಾಯಿ ಮೈಗೆಲ್ಲಾ ಬೆಂಕಿಯಿಂದ ಬರೆ ಹಾಕಿದ್ದಾರಂತೆ. ನನ್ನ ಮಗನಿಗೆ ನೀನು ಬೇಡ 1 ಲಕ್ಷ ಪರಿಹಾರ ಕೊಡುತ್ತೇವೆ ವಿಚ್ಛೇದನ ಕೊಡುವಂತೆ ಒತ್ತಡ ಹಾಕುತ್ತಿದ್ದಾರೆ. ಜೊತೆಗೆ ಗಂಡ ಬಸವರಾಜ್ ಸಹ ಬೇರೊಬ್ಬಳ ಮದುವೆ ಆಗಲು ಸಿದ್ಧತೆ ನಡೆಸುತ್ತಿದ್ದಾನೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ಪೊಲೀಸರು ನಾನು ಕೊಟ್ಟ ದೂರನ್ನು ಸ್ವೀಕರಿಸದೇ ನನಗೆ ಬೈಯ್ದು ಕಳುಹಿಸುತ್ತಾರೆ ಎಂದು ನವವಿವಾಹಿತೆ ಆರೋಪಿಸಿದ್ದಾಳೆ.

ನಾನು ಈತನನ್ನು ನಂಬಿ ನನ್ನ ಜೀವನ ಹಾಳು ಮಾಡಿಕೊಂಡಿದ್ದೇನೆ. ನಾನು ಏಕೆ ವಿಚ್ಛೇದನ ನೀಡಲಿ ನಾನು ಬದುಕಿದರೆ ಗಂಡನ ಜೊತೆಯೇ ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೆ ಯತ್ನಿಸಿದ ನವವಿವಾಹಿತೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ನನಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದ್ದಾಳೆ.

Comments

Leave a Reply

Your email address will not be published. Required fields are marked *