3 ತಿಂಗಳ ನಂತ್ರ ಕೋಲಾರದಲ್ಲಿ ಟೊಮಾಟೊ ಬೆಳೆಗಾರರಿಗೆ ಅದೃಷ್ಟ

– 15 ಕೆ.ಜಿ. ಬಾಕ್ಸ್ 700 ರಿಂದ 800 ರೂ.ಗೆ ಮಾರಾಟ

ಕೋಲಾರ: ಟೊಮಾಟೊ ಬೆಲೆ ಏರಿಕೆಯಾಗಿದ್ದು ರೈತರ ಮೊಗದಲ್ಲಿ ಸಂತಸ ಮೂಡಿದೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಕಳೆದ ಒಂದು ವಾರದಿಂದ 15 ಕೆ.ಜಿ ತೂಕದ ಒಂದು ಬಾಕ್ಸ್ ಟೊಮಾಟೊ 800 ರೂ.ಗಳಿಗೆ ಏರಿಕೆ ಆಗಿದೆ. ಅಂಗಡಿಗಳಲ್ಲಿ ಒಂದು ಕೆ.ಜಿ ಟೊಮಾಟೊ ಬೆಲೆ 20 ರಿಂದ 30 ರೂಪಾಯಿ ಏರಿಕೆಯಾಗಿದೆ.

ಸಾಮಾನ್ಯವಾಗಿ ಕಳೆದ 3 ತಿಂಗಳಿನಿಂದ ಬೆಲೆಯಿಲ್ಲದೆ ಕಂಗಾಲಾಗಿದ್ದ ಟೊಮಾಟೊ ಬೆಳೆಗಾರರು ಈಗ ಖುಷಿಯಾಗಿದ್ದಾರೆ. ಯಾಕಂದರೆ ತೋಟದಲ್ಲೆ ಕೊಳೆಯುವಷ್ಟು ಟೊಮಾಟೊ ಬೆಳೆದಿದ್ದ ರೈತರಿಗೆ ಬೆಲೆಯಿಲ್ಲದೆ ಕಂಗಾಲಾಗಿದ್ದರು. ಕೋಲಾರ ಜಿಲ್ಲೆಯಲ್ಲಿ ಉತ್ತಮ ತಳಿಯ ಟೊಮಾಟೊವನ್ನು ಇಲ್ಲಿನ ರೈತರು ಬೆಳೆಯುತ್ತಾರೆ. ಜಿಲ್ಲೆಯಲ್ಲಿ ನೀರಿನ ಅಭಾವ ಇದೆ, ಅಂತರ್ಜಲ ಮಟ್ಟ ಕುಸಿದಿದೆ, 1500 ಆಳದಿಂದ ನೀರು ತೆಗೆದು ಕಷ್ಟಪಟ್ಟು ಬೆಳೆ ಮಾಡುತ್ತಾರೆ.

ಹಾಗಾಗಿ ಇಲ್ಲಿನ ಟೊಮಾಟೊಗೆ ನೆರೆಯ ಆಂಧ್ರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ದೆಹಲಿ ಮುಂತಾದ ರಾಜ್ಯಗಳು ಸೇರಿದಂತೆ ಪಾಕಿಸ್ತಾನ ಹಾಗೂ ಬಾಂಗ್ಲಾ ದೇಶಗಳಲ್ಲಿ ಹೆಚ್ಚಾಗಿ ಬೇಡಿಕೆ ಇದೆ. ಇದರಿಂದಾಗಿ ಈ ಸೀಸನ್‍ನಲ್ಲಿ ಸ್ಥಳೀಯ ಟೊಮಾಟೊಗೆ ಉತ್ತಮ ಬೆಲೆ ಸಿಗುತ್ತಿದ್ದು, ಟನ್‍ಗಟ್ಟಲೇ ಟೊಮಾಟೊ ರಫ್ತು ಮಾಡಲಾಗುತ್ತದೆ. ಜುಲೈ ಮೊದಲ ವಾರದಿಂದ ಟೊಮಾಟೊ ಬೆಲೆಯಲ್ಲಿ ಏರಿಕೆಯಾಗಿದ್ದು, ಆಗಸ್ಟ್ ತಿಂಗಳವರೆಗೆ ಉತ್ತಮ ಬೆಲೆ ಇರುತ್ತದೆ. ಈ ಸೀಸನ್‍ನಲ್ಲಿ ಕೋಲಾರದ ಟೊಮಾಟೊ ಹೊರ ರಾಜ್ಯ ಮತ್ತು ಹೊರ ದೇಶಗಳಿಗೂ ಸಾಗಣೆ ಆಗುತ್ತಿದ್ದು, ಟೊಮೆಟೊ ಬೆಲೆ ಗಗನಕ್ಕೇರಿ ಟೊಮಾಟೊಗೆ ಚಿನ್ನದ ಬೆಲೆ ಬಂದಿದೆ.

ಜಿಲ್ಲೆಯಲ್ಲಿ ಸೀಡ್ಸ್ ಮತ್ತು ನಾಟಿ ಟೊಮಾಟೊವನ್ನು ಬೆಳೆಯಲಾಗುತ್ತದೆ. ಮಾರ್ಚ್ ತಿಂಗಳಿನಿಂದ ಮೇ ತಿಂಗಳವರೆಗೆ ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಟೊಮಾಟೊ ಬೆಳೆಯಲು ಕಷ್ಟವಾಗುತ್ತದೆ. ಈ ರಾಜ್ಯಗಳಲ್ಲಿ ಹೆಚ್ಚು ಬಿಸಿಲು ಇರುವುದರಿಂದ ಟೊಮಾಟೊ ಬೆಳೆಯಲು ಪೂರಕ ವಾತಾವರಣ ಇರುವುದಿಲ್ಲ. ಹೀಗಾಗಿ ಕೋಲಾರ ಜಿಲ್ಲೆಯ ಈ ಅವಧಿಯಲ್ಲಿ ಹೆಚ್ಚಿಗೆ ಟೊಮಾಟೊ ಬೆಳೆಯಲಾಗುತ್ತದೆ. ಇದರ ಜತೆಗೆ ಬೇರೆ ರಾಜ್ಯಗಳಲ್ಲಿ ಮುಂಗಾರು ಮಳೆ ಬೀಳುವುದರಿಂದ ಮಳೆಯಿಂದ ಬೆಳೆಗಳಿಗೆ ಹಾನಿ ಆಗುತ್ತದೆ.

ಇದರಿಂದಲೂ ಕೋಲಾರದ ಟೊಮಾಟೊಗೆ ಹೆಚ್ಚಿನ ಬೆಲೆ ಸಿಗುತ್ತದೆ ಎಂದು ಟೊಮಾಟೊ ವ್ಯಾಪಾರಿಗಳು ಹೇಳುತ್ತಾರೆ. ಈ ಬಾರಿ ಬಿಸಿಲು ಹೆಚ್ಚಾಗಿದ್ದರಿಂದ ಬೆಳೆ ಕೂಡ ಉತ್ತಮವಾಗಿದೆ. ಇದರಿಂದ ಬೆಲೆ ಏರಿಕೆ ಹೆಚ್ಚಾಗಿದೆ. ಹೊರ ರಾಜ್ಯಗಳಲ್ಲಿ ಕೊರೊನಾ ಭೀತಿ ಇರುವುದರಿಂದ ಬೆಲೆ ಏರಿಕೆ ನಿಧಾನಗತಿಯಲ್ಲಿ ಏರುತ್ತಿದೆ. 15 ದಿನಗಳ ನಂತರ ಟೊಮಾಟೊ ಬೆಲೆ ಒಂದು ಬಾಕ್ಸ್ ಗೆ 800 ರೂ.ಗಳಿಗೆ ಏರಿಕೆ ಆಗಿದೆ.

Comments

Leave a Reply

Your email address will not be published. Required fields are marked *