3 ತಿಂಗಳು ಮುಂಬೈನಲ್ಲಿ ಸಿಲುಕಿದ್ದ ಪತ್ನಿ, ಮಕ್ಕಳು ವಾಪಸ್- ಸಂತಸದಲ್ಲಿ ತೇಲಾಡಿದ ಪತಿ

– ಪತ್ನಿ ಮಕ್ಕಳನ್ನು ಕಂಡು ಆನಂದಭಾಷ್ಪ ಹರಿಸಿದ ಪತಿ
– ಕೊರೊನಾದಿಂದಾಗಿ ಮಕ್ಕಳಿಗೆ ಸಿಗಲಿಲ್ಲ ಅಪ್ಪನ ಅಪ್ಪುಗೆ

ಗದಗ: ಲಾಕ್‍ಡೌನ್‍ನಿಂದಾಗಿ ಭಾರೀ ಅನಾಹುತಗಳು ಸಂಭವಿಸಿದ್ದು, ಕಾರ್ಮಿಕ ಗೋಳು ಒಂದು ಕಡೆಯಾದರೆ, ಊರಿಗೆ ಹೋಗಿದ್ದ ಎಷ್ಟೋ ಕುಟುಂಬಗಳು ಅಲ್ಲೇ ಲಾಕ್ ಆಗಿದ್ದವು. ತುಂಬಾ ಜನ ಕುಟುಂಬದಿಂದ ದೂರ ಉಳಿದಿದ್ದರು. ಅದೇ ರೀತಿ ಮುಂಬೈನಲ್ಲಿ ಸಿಲುಕಿದ್ದ ಹುಬ್ಬಳ್ಳಿ ಮೂಲದ ಕುಟುಂಬ ವಾಪಾಸ್ಸಾಗಿದ್ದು, ಪತಿ ಆನಂದಭಾಷ್ಪ ಹರಿಸಿದ್ದಾರೆ.

ಲಾಕ್‍ಡೌನ್‍ನಿಂದಾಗಿ ಮುಂಬೈನಲ್ಲಿ ಸಿಲುಕಿದ್ದ ಹುಬ್ಬಳ್ಳಿ ಮೂಲದ ಕುಟುಂಬವೊಂದು ನಗರದ ರೈಲ್ವೆ ನಿಲ್ದಾಣಕ್ಕೆ ಬಂದಿಳಿಯಿತು. ಮುಂಬೈನಿಂದ ಬಂದ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕಂಡ ಪತಿಯ ಸಂತಸಕ್ಕೆ ಪಾರವೇ ಇಲ್ಲದಂತಾಗಿತ್ತು. ಅಲ್ಲದೆ ಪತ್ನಿ, ಮಕ್ಕಳು ಸಹ ಹರ್ಷಗೊಂಡರು.

ಹುಬ್ಬಳ್ಳಿ ಮೂಲದ ಮಂಜುನಾಥ ಅವರ ಪತ್ನಿ ಲತಾ ಹಾಗೂ ಅವಳಿ ಮಕ್ಕಳಾದ ಗೌರಿ, ಗಣೇಶ್ ಮುಂಬೈನಲ್ಲಿ ಸಂಬಂಧಿಕರ ಮನೆಯಲ್ಲಿ ಸಿಲುಕಿಕೊಂಡಿದ್ದರು. ಲಾಕ್‍ಡೌನ್ ನಿಂದ 3 ತಿಂಗಳು ಪತ್ನಿ ಹಾಗೂ ಎರಡು ಮಕ್ಕಳ ಮುಖವನ್ನು ನೋಡಿರದ ಪತಿ, ಈಗ ಅವರನ್ನು ನೋಡಿ ಆನಂದಭಾಷ್ಪ ಹರಿಸಿದರು. ಪತಿ ಹುಬ್ಬಳ್ಳಿಯಲ್ಲಿದ್ದರೆ, ಪತ್ನಿ ಹಾಗೂ ಮಕ್ಕಳು ಮುಂಬೈಯಲ್ಲಿ ಸಿಲುಕಿಕೊಂಡಿಸಿದ್ದರು.

ಗದಗ ರೈಲು ನಿಲ್ದಾಣದಲ್ಲಿ ಮುಖಾಮುಖಿಯಾದ ನಂತರ ಮಕ್ಕಳು ತಂದೆಯನ್ನು ನೋಡಿ ಓಡಿ ಬರಲು ಯತ್ನಿಸಿದರು. ಆದರೆ ಕೊರೊನಾ ಸಂದರ್ಭದಲ್ಲಿ ಕ್ವಾರಂಟೈನ್ ಆಗದೇ ಮತ್ತೊಬ್ಬ ವ್ಯಕ್ತಿಯ ಸಂಪರ್ಕಕ್ಕೆ ಅವಕಾಶ ಇಲ್ಲದ ಕಾರಣ ದೂರದಲ್ಲೆ ಕೈಮಾಡಿ ಸಂತಸ ಪಟ್ಟರು. ನಂತರ ಹುಬ್ಬಳ್ಳಿಯಲ್ಲಿ ಕ್ವಾರಂಟೈನ್ ಆಗುವುದಾಗಿ ಹೇಳಿದ್ದರಿಂದ, ಧಾರವಾಡ ಜಿಲ್ಲಾಡಳಿತ ಪರವಾನಿಗೆ ಪಡೆದು ಬಸ್ ಮೂಲಕ ಕಳುಹಿಸಲಾಯಿತು.

Comments

Leave a Reply

Your email address will not be published. Required fields are marked *