ರಾಹುಲ್‌, ರೋಹಿತ್‌ ಶತಕದ ಜೊತೆಯಾಟ- ಟಿ20 ಸರಣಿ ಗೆದ್ದ ಟೀಂ ಇಡಿಯಾ

ರಾಂಚಿ: ಕೆಎಲ್‌ ರಾಹುಲ್‌ ಮತ್ತು ನಾಯಕ ರೋಹಿತ್‌ ಶರ್ಮಾ ಅವರ ಶತಕದ ಜೊತೆಯಾಟದಿಂದಾಗಿ ಭಾರತ ನ್ಯೂಜಿಲೆಂಡ್‌ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಪೇಟಿಎಂ ಟಿ20 ಸರಣಿಯನ್ನು 2-0 ಅಂತರದಿಂದ ಜಯಿಸಿದೆ.

ಗೆಲ್ಲಲು 154 ರನ್‌ಗಳ ಸವಾಲು ಪಡೆದ ಭಾರತ 17.2 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 155 ರನ್‌ ಹೊಡೆಯಿತು. ಟ್ರೋಫಿ ಗೆಲ್ಲುವ ಮೂಲಕ ಅಧಿಕೃತ ಕೋಚ್‌ ಆಗಿ ನೇಮಕಗೊಂಡ ರಾಹುಲ್‌ ದ್ರಾವಿಡ್‌ ಅವರು ಈ ಸರಣಿಯನ್ನು ಸ್ಮರಣೀಯವಾಗಿಸಿಕೊಂಡಿದ್ದಾರೆ.
ಇದನ್ನೂ ಓದಿ: ಎಲ್ಲಾ ಮಾದರಿಯ ಕ್ರಿಕೆಟ್ ಜೊತೆ ಆರ್‌ಸಿಬಿಗೂ ವಿದಾಯ ಹೇಳಿದ ಎಬಿಡಿ

ಮೊದಲ ವಿಕೆಟಿಗೆ ಕೆಎಲ್‌ ರಾಹುಲ್‌ ಮತ್ತು ರೋಹಿತ್‌ ಶರ್ಮಾ 80 ಎಸೆತಗಳಿಗೆ 117 ರನ್‌ ಹೊಡೆದು ಭದ್ರವಾದ ಅಡಿಪಾಯ ಹಾಕಿದರು. ರಾಹುಲ್‌ 65 ರನ್‌(49 ಎಸೆತ, 6 ಬೌಂಡರಿ, 2 ಸಿಕ್ಸರ್‌), ರೋಹಿತ್‌ ಶರ್ಮಾ 55 ರನ್‌(36 ಎಸೆತ, 1 ಬೌಂಡರಿ, 5 ಸಿಕ್ಸರ್‌) ಹೊಡೆದು ಔಟಾದರು. ಸೂರ್ಯಕುಮಾರ್‌ ಯಾದವ್‌ 1 ರನ್‌ ಗಳಿಸಿ ಔಟಾದರೂ ವೆಂಕಟೇಶ್‌ ಅಯ್ಯರ್‌ ಔಟಾಗದೇ 12 ರನ್‌, ರಿಷಭ್‌ ಪಂತ್‌ ಔಟಾಗದೇ 12 ರನ್‌ ಹೊಡೆದು ಜಯವನ್ನು ತಂದುಕೊಟ್ಟರು.

ಟಾಸ್‌ ಸೋತರೂ ಉತ್ತಮ ಆರಂಭ ಪಡೆದಿದ್ದ ನ್ಯೂಜಿಲೆಂಡ್‌ ಮಧ್ಯಮ ಕ್ರಮಾಂಕದಲ್ಲಿ ಹಠಾತ್‌ ಕುಸಿತ ಕಂಡಿತು. ಮಾರ್ಟಿನ್‌ ಗುಪ್ಟಿಲ್‌ 31 ರನ್‌(15 ಎಸೆತ, 4 ಬೌಂಡರಿ, 2 ಸಿಕ್ಸರ್‌) ಡೇರಿಲ್ ಮಿಚೆಲ್ 31 ರನ್‌(28 ಎಸೆತ,3 ಬೌಂಡರಿ) ಮಾರ್ಕ್‌ ಚಾಂಪ್ಮನ್‌ 21 ರನ್‌(17 ಎಸೆತ, 3 ಬೌಂಡರಿ), ಗ್ಲೇನ್‌ ಫಿಲಿಪ್ಸ್‌ 34 ರನ್‌(21 ಎಸೆತ, 1 ಬೌಂಡರಿ, 3 ಸಿಕ್ಸರ್‌) ಹೊಡೆದು ಔಟಾದರು. ಅಂತಿಮವಾಗಿ ನ್ಯೂಜಿಲೆಂಡ್‌ 6 ವಿಕೆಟ್‌ ನಷ್ಟಕ್ಕೆ 153 ರನ್‌ ಗಳಿಸಿತು.

ಇಂದು ಮೊದಲ ಪಂದ್ಯವಾಡಿದ ಹರ್ಷಲ್‌ ಪಟೇಲ್‌ 25 ರನ್‌ ನೀಡಿ ಎರಡು ವಿಕೆಟ್‌ ಪಡೆದರು. ಭುವನೇಶ್ವರ್‌ ಕುಮಾರ್‌, ದೀಪಕ್‌ ಚಹರ್‌, ಅಕ್ಷರ್‌ ಪಟೇಲ್‌, ಅಶ್ವಿನ್‌ ತಲಾ ಒಂದೊಂದು ವಿಕೆಟ್‌ ಪಡೆದರು.

Comments

Leave a Reply

Your email address will not be published. Required fields are marked *