ಮುಂಬೈ ದಾಳಿ ಮಾಸ್ಟರ್‌ಮೈಂಡ್‌ ತಹವ್ವೂರ್‌ ರಾಣಾ ಅರೆಸ್ಟ್‌

– ವಿಮಾನ ದೆಹಲಿಗೆ ಬಂದು ಇಳಿಯುತ್ತಿದ್ದಂತೆ ರಾಣಾ ಬಂಧಿಸಿದ ಎನ್‌ಐಎ

ನವದೆಹಲಿ: ಮುಂಬೈ ದಾಳಿಯ (Mumbai Attack) ಮಾಸ್ಟರ್‌ಮೈಂಡ್‌ ತಹವ್ವೂರ್‌ ರಾಣಾ (Tahawwur Rana) ದೆಹಲಿಗೆ ಬರುತ್ತಿದ್ದಂತೆಯೇ ಆತನನ್ನು ಎನ್‌ಐಎ ಬಂಧಿಸಿದೆ.

26/11 ಭಯೋತ್ಪಾದಕ ದಾಳಿಯ ಸಂಚುಕೋರ, ಭಾರತಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ತಹವ್ವೂರ್ ಹುಸೇನ್ ರಾಣಾನನ್ನು ಗುರುವಾರ ದೆಹಲಿಯ ವಿಮಾನ ನಿಲ್ದಾಣಕ್ಕೆ ಕರೆತರಲಾಯಿತು. ಬುಧವಾರ ವಿಶೇಷ ವಿಮಾನದಲ್ಲಿ ಅಮೆರಿಕದಿಂದ ಆತನನ್ನು ಗಡೀಪಾರು ಮಾಡಲಾಗಿತ್ತು. ಇದನ್ನೂ ಓದಿ: ಉಗ್ರ ಕಸಬ್‌ಗೆ ಬಿರಿಯಾನಿ ತಿನ್ನಿಸಿದ್ದನ್ನ ಮರೆತಿಲ್ಲ – ಕಾಂಗ್ರೆಸ್‌ ವಿರುದ್ಧ ಪಿಯೂಷ್‌ ಗೋಯಲ್‌ ವಾಗ್ದಾಳಿ

64 ವಯಸ್ಸಿನ ತಹವ್ವೂರ್ ರಾಣಾನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿದೆ. ನಿನ್ನೆ ಅಮೆರಿಕದ ಲಾಸ್ ಏಂಜಲೀಸ್‌ನಿಂದ ಹೊರಟ ರಾಣಾ ಇದ್ದ ವಿಮಾನ ದೆಹಲಿಯ ಪಾಲಂ ತಾಂತ್ರಿಕ ಪ್ರದೇಶದಲ್ಲಿ ಇಂದು ಸಂಜೆ ಇಳಿಯಿತು. ಪ್ರಾಥಮಿಕ ಔಪಚಾರಿಕತೆಯ ನಂತರ ಆತನನ್ನು ಎನ್‌ಐಎ ಪ್ರಧಾನ ಕಚೇರಿಗೆ ಕರೆದೊಯ್ಯುವ ಸಾಧ್ಯತೆಯಿದೆ. ಉಗ್ರನನ್ನು ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯಕ್ಕೂ ಹಾಜರುಪಡಿಸಲಾಗುವುದು.

ನಂತರ ಭಯೋತ್ಪಾದಕ ರಾಣಾನನ್ನು ದೆಹಲಿಯ ಹೆಚ್ಚಿನ ಭದ್ರತೆ ಕಲ್ಪಿಸಲಾಗಿರುವ ತಿಹಾರ್ ಜೈಲಿನಲ್ಲಿ ಇರಿಸಬಹುದು. ಅಂತಿಮವಾಗಿ ವಿಚಾರಣೆಯನ್ನು ಎದುರಿಸಲು ಮುಂಬೈಗೆ ಸ್ಥಳಾಂತರಿಸಬಹುದು ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ರಾಣಾನಿಗೆ ಬಿರಿಯಾನಿ ಕೊಡಬೇಡಿ: ಮುಂಬೈ ದಾಳಿಯಲ್ಲಿ ಜನರ ರಕ್ಷಣೆಗೆ ನೆರವಾಗಿದ್ದ ಚಹಾ ಮಾರಾಟಗಾರ ಒತ್ತಾಯ

ಉಗ್ರನ ಮೇಲೆ ಕ್ರಿಮಿನಲ್ ಪಿತೂರಿ, ಭಾರತ ಸರ್ಕಾರದ ವಿರುದ್ಧ ಯುದ್ಧ ಸಾರುವುದು, ಕೊಲೆ ಮತ್ತು ನಕಲಿ ದಾಖಲೆ ಸೃಷ್ಟಿ, ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ರಾಣಾ ಹಿಂದಿರುಗುವ ಮುನ್ನ ನಿನ್ನೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನಡುವೆ ಸಭೆ ನಡೆದಿತ್ತು. ನಂತರ ಅಮಿತ್‌ ಶಾ ಅವರು, ಈ ಹಸ್ತಾಂತರವು ಪ್ರಧಾನಿ ನರೇಂದ್ರ ಮೋದಿಯವರ ರಾಜತಾಂತ್ರಿಕತೆಯ ದೊಡ್ಡ ಗೆಲುವು ಎಂದು ಬಣ್ಣಿಸಿದ್ದಾರೆ.

ಅಮೆರಿಕಗೆ ಪ್ರಧಾನಿ ಮೋದಿ ಅವರ ಭೇಟಿಯ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅತ್ಯಂತ ದುಷ್ಟ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅನುಮೋದನೆ ನೀಡಲಾಗಿದೆ ಎಂದು ಘೋಷಿಸಿದ್ದರು. ಆದಾದ ಎರಡು ತಿಂಗಳ ನಂತರ ರಾಣಾನನ್ನು ಹಸ್ತಾಂತರಿಸಲಾಗಿದೆ. ಇದನ್ನೂ ಓದಿ: ಕೊನೆಗೂ ಭಾರತಕ್ಕೆ ಬಂದ ಮುಂಬೈ ದಾಳಿ ಉಗ್ರ ರಾಣಾ