ಗೆದ್ದು ಬೀಗಿದ ಲೂಸ್ ಮಾದ ಯೋಗಿಯ ‘ಲಂಕೆ’ ಸಿನಿಮಾ – 25 ದಿನದ ಸಂಭ್ರಮದಲ್ಲಿ ಚಿತ್ರತಂಡ

ಬೆಂಗಳೂರು: ಲೂಸ್ ಮಾದ ಯೋಗಿ ಅಭಿನಯದ ‘ಲಂಕೆ’ ಸಿನಿಮಾ ಥಿಯೇಟರ್ ಅಂಗಳದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಗಣೇಶ ಚತುರ್ಥಿಗೆ ಬಿಡುಗಡೆಯಾದ ಲಂಕೆ ಸಿನಿಮಾ ಭರ್ಜರಿ ಓಪನಿಂಗ್ ಜೊತೆಗೆ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡುತ್ತಿದೆ.

ಬಿಡುಗಡೆಯಾದ ಎಲ್ಲಾ ಭಾಗದಲ್ಲೂ ಪಾಸಿಟಿವ್ ರೆಸ್ಪಾನ್ಸ್ ಗಿಟ್ಟಿಸಿಕೊಂಡ ಸಿನಿಮಾ ಲೂಸ್ ಮಾದ ಯೋಗಿಗೆ ಭರ್ಜರಿ ಕಂಬ್ಯಾಕ್ ನೀಡಿದೆ. ಬಿಡುಗಡೆಯಾದ ದಿನದಿಂದಲೂ ಹೌಸ್ ಫುಲ್ ಪ್ರದರ್ಶನದೊಂದಿಗೆ ಚಿತ್ರಮಂದಿರಗಳಲ್ಲಿ ‘ಲಂಕೆ’ ಓಟ ಜೋರಾಗಿದ್ದು, ಇದೀಗ 25 ದಿನಗಳನ್ನು ಯಶಸ್ವಿಯಾಗಿ ಪೂರೈಸಿದ ಸಂಭ್ರಮದಲ್ಲಿದೆ ಚಿತ್ರತಂಡ.  ಇದನ್ನೂ ಓದಿ:  ಯಾರೂ ನನ್ನನ್ನು ಕೈಹಿಡಿದಿಲ್ಲ: ರಣವೀರ್ ಸಿಂಗ್

ದಿ ಗ್ರೇಟ್ ಎಂಟಟೈನರ್ಸ್ ಬ್ಯಾನರ್ ನಲ್ಲಿ ಅದ್ದೂರಿಯಾಗಿ ನಿರ್ಮಾಣವಾಗಿ ತೆರೆಕಂಡ ಸಿನಿಮಾ ‘ಲಂಕೆ’. ಒಂದು ಬಿಗ್ ಕಂಬ್ಯಾಕ್ ಗಾಗಿ ಕಾಯುತ್ತಿದ್ದ ಯೋಗಿಗೆ ಪರ್ಫೆಕ್ಟ್ ಸಿನಿಮಾ ಎಂಬಂತೆ ‘ಲಂಕೆ’ ಮೂಡಿ ಬಂದಿತ್ತು. ರಾಮ್ ಪ್ರಸಾದ್ ಮಾಡಿಕೊಂಡಿದ್ದ ಪಕ್ಕಾ ಔಟ್ ಅಂಡ್ ಔಟ್ ಕಮರ್ಶಿಯಲ್ ಎಳೆಯ ಸಬ್ಜೆಕ್ಟ್ ಕೂಡ ಅಷ್ಟೇ ಥ್ರಿಲ್ಲಿಂಗ್ ಆಗಿತ್ತು. ಮಾಸ್ ಆಕ್ಷನ್ ಡ್ರಾಮಾ ಸಬ್ಜೆಕ್ಟ್ ಯೋಗಿಗೆ ಹೇಳಿ ಮಾಡಿಸಿದಂತಿತ್ತು. ಜೊತೆಗೆ ಸಿನಿಮಾ ಹಾಡುಗಳು, ಹೈವೋಲ್ಟೇಜ್ ಆಕ್ಷನ್ ಸೀಕ್ವೆನ್ಸ್ ಎಲ್ಲದರ ಜುಗಲ್ಬಂದಿ ಚಿತ್ರರಸಿಕರಿಗೆ ಫುಲ್ ಪ್ಯಾಕೇಜ್ ಮನೋರಂಜನೆ ನೀಡಿದೆ. ಗಲ್ಲಾಪೆಟ್ಟಿಗೆಯಲ್ಲೂ ಸೌಂಡ್ ಮಾಡಿದೆ. ಇದೀಗ ನಿರೀಕ್ಷೆಯಂತೆ ಗೆಲುವಿನ ನಗೆ ಬೀರಿ 25 ದಿನಗಳನ್ನು ಯಶ್ವಸಿಯಾಗಿ ಪೂರೈಸಿದೆ ‘ಲಂಕೆ’ ಚಿತ್ರ.

ಲೂಸ್ ಮಾದ ಯೋಗಿ, ಕೃಷಿ ತಾಪಂಡ, ಕಾವ್ಯಾ ಶೆಟ್ಟಿ, ಎಸ್ಟರ್ ನರೋನ್ಹಾ, ಸಂಚಾರಿ ವಿಜಯ್ ಮುಖ್ಯ ಭೂಮಿಕೆಯ ಈ ಚಿತ್ರದಲ್ಲಿ ಸ್ಯಾಂಡಲ್ ವುಡ್ ಘಟಾನುಘಟಿ ಸ್ಟಾರ್ ಕಲಾವಿದರಾದ ಸುಚೇಂದ್ರ ಪ್ರಸಾದ್, ಶರತ್ ಲೋಹಿತಾಶ್ವ, ಶೋಭರಾಜ್, ಡ್ಯಾನಿ ಕುಟ್ಟಪ್ಪ ಸೇರಿದಂತೆ ಹಲವು ಕಲಾವಿದರು ಅಮೋಘ ಅಭಿನಯದ ಮೂಲಕ ಗಮನ ಸೆಳೆದಿದ್ದಾರೆ. ಇದನ್ನೂ ಓದಿ:  ಶಾರೂಖ್, ಗೌರಿ ಖಾನ್ ಬೆಂಬಲಕ್ಕೆ ನಿಂತ ಹೃತಿಕ್ ಮಾಜಿ ಪತ್ನಿ, ಮಿಕಾ ಸಿಂಗ್!

ಕಾರ್ತಿಕ್ ಶರ್ಮಾ ಸಂಗೀತ, ರಮೇಶ್ ಬಾಬು ಕ್ಯಾಮೆರಾ ವರ್ಕ್ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್. ಒಟ್ನಲ್ಲಿ, ಪ್ರೇಕ್ಷಕರಿಗೆ ಮನರಂಜನೇ ನೀಡೋದ್ರ ಜೊತೆಗೆ ಗಲ್ಲಾಪೆಟ್ಟಿಗೆಯಲ್ಲೂ ಒಳ್ಳೆ ಕಲೆಕ್ಷನ್ ಮಾಡಿದೆ ಲಂಕೆ.

Comments

Leave a Reply

Your email address will not be published. Required fields are marked *