ಬೆಂಗಳೂರು: ಭಾರೀ ಮಳೆಯಿಂದಾಗಿ ಮರವೊಂದು ಬುಡ ಸಮೇತ ಮನೆ ಮೇಲೆ ಕುಸಿದು ಬಿದ್ದ ಪರಿಣಾಮ 40ಕ್ಕೂ ಹೆಚ್ಚು ಹದ್ದುಗಳು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ನಡೆದಿದೆ.

ಇಲ್ಲಿನ ಜಲಕಂಠೇಶ್ವರ ದೇಗುಲದಲ್ಲಿ ಈ ಘಟನೆ ನಡೆದಿದೆ. ಸುಮಾರು 250 ವರ್ಷಗಳ ಇತಿಹಾಸವಿರುವ ಮರ ಬುಡಸಮೇತ ಕುದಿದು ಬಿದ್ದಿದೆ. ಪರಿಣಾಮ ಮರದಲ್ಲಿದ್ದ ಪಕ್ಷಿಗಳಲ್ಲಿ ಸುಮಾರು 40ಕ್ಕೂ ಹೆಚ್ಚು ಹದ್ದುಗಳು ಸಾವನ್ನಪ್ಪಿವೆ. ಮನೆಯ ಮೇಲೆ ಮರ ಬಿದ್ದಿರುವುದರಿಂದ ಗೋಡೆಯೊಳಗೆ ಹದ್ದುಗಳು ಸಿಲುಕಿವೆ. ಜೀವ ಭಯದಿಂದ ಕೆಲವು ಹದ್ದುಗಳು ಒದ್ದಾಡುತ್ತಿವೆ. ಮರ ಬಿದ್ದ ಪರಿಣಾಮ ಇಡೀ ಮನೆ ಕುಸಿದು ಬಿದ್ದಿದೆ. ಮನೆಯವರಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಯ ಅವಶೇಷದಡಿ ಇನ್ನಷ್ಟು ಪಕ್ಷಿಗಳು ಸಿಲುಕಿರುವ ಶಂಕೆ ಇದೆ.

ಸ್ಥಳಕ್ಕೆ ಶಾಸಕ ಆರ್‍ವಿ ದೇವರಾಜ್ ಭೇಟಿ ನೀಡಿ ಪರಿಸರ ಪ್ರೇಮಿಗಳ ವಿರುದ್ಧ ಕಿಡಿ ಕಾರಿದ್ರು. ಮರ ಕಡಿಯೋಕೆ ಮುಂದಾದ್ರೆ ಬಂದು ಮರವನ್ನ ತಬ್ಕೋತಾರೆ. ಈಗ ನಾವು ಹೊಣೆ ಹೊತ್ತು ಕೊಳ್ಳಬೇಕು. ಮರ ಟ್ರಿಮ್ ಮಾಡೋದಕ್ಕೆ ಕೂಡ ಅವಕಾಶ ನೀಡಿಲ್ಲ. ಹೀಗಾದ್ರೆ ನಾವು ಕೆಲಸ ಮಾಡೋದು ಹೇಗೆ? ನಾನು ಸಿಎಂಗೆ ಹೇಳ್ತೀನಿ. ಮರ ಬಿದ್ರೂ ಪರವಾಗಿಲ್ಲ ಕಡಿಬೇಡಿ ಅಂತ ನಂಗೆ ಹೇಳ್ತಾರೆ ಈ ಬುದ್ಧಿ ಜೀವಿಗಳು ಅಂದ್ರು.

ನಾವೆಲ್ಲ ಪೂಜೆ ಮಾಡುತ್ತಿದ್ವಿ. ಸುಮಾರು ಐನೂರಕ್ಕೂ ಹೆಚ್ಚು ಪಕ್ಷಿಗಳು ಈ ಮರದಲ್ಲಿ ಇದ್ವು. ಈಗ ಆಶ್ರಯ ಕಳೆದುಕೊಂಡಿದ್ದಾವೆ. ಎಷ್ಟೋ ಪಕ್ಷಿಗಳು ಸಾವನ್ನಪ್ಪಿದ್ದಾವೆ ಅಂತ ಆರ್‍ವಿ ದೇವರಾಜ್ ಹೇಳಿದ್ರು.

ಹದ್ದುಗಳ ಸಾವಿನ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ವರದಿ ನೋಡಿದ ಬಳಿಕ ಬಿಬಿಎಂಪಿ ಅನಿಮಲ್ ರೆಸ್ಕ್ಯೂ ಟೀಮ್ ಸದಸ್ಯ ರಾಜೇಶ್ ರಕ್ಷಣೆಗೆ ಧಾವಿಸಿದ್ದಾರೆ. ಹದ್ದುಗಳನ್ನು ಮರದ ಅವಶೇಷದಡಿಯಿಂದ ಎತ್ತಿ ರಕ್ಷಣೆ ಮಾಡಿದ್ದಾರೆ.
https://www.youtube.com/watch?v=g3oGXYYSpaM













Leave a Reply