ಅಮೆರಿಕದ ಬ್ಯಾಂಕಿನಲ್ಲಿ ಗನ್‍ಮ್ಯಾನ್ ದಾಳಿಗೆ ಭಾರತೀಯ ಸೇರಿ ಮೂವರು ಬಲಿ

ನ್ಯೂಯಾರ್ಕ್: ಬ್ಯಾಂಕ್ ಗನ್‍ಮ್ಯಾನ್ ಗುಂಡು ಹಾರಿಸಿದ್ದರಿಂದ ಭಾರತೀಯ ವ್ಯಕ್ತಿಯೊಬ್ಬರು ಸೇರಿ ಮೂವರು ಮಂದಿ ಮೃತಪಟ್ಟಿರುವ ಘಟನೆ ಅಮೆರಿಕದ ಸಿನ್ಸಿನ್ನಾಟಿಯಲ್ಲಿ ನಡೆದಿದೆ.

ಈ ಘಟನೆ ಗುರುವಾರ ನಡೆದಿದ್ದು, ಆಂಧ್ರ ಪ್ರದೇಶದವರಾದ ಪೃಥ್ವಿರಾಜ್ ಕಂದೆಪಿ ಗನ್‍ಮ್ಯಾನ್‍ನಿಂದ ಮೃತಪಟ್ಟಿದ್ದಾರೆ. ಅವರು ಬ್ಯಾಂಕಿನಲ್ಲಿ ಸಲಹೆಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರೊಂದಿಗೆ ಲೂಯಿಸ್ ಫಿಲಿಪ್ ಕಾಲ್ಡೆರಾನ್ (48) ಮತ್ತು ರಿಚರ್ಡ್ ನ್ಯೂಕಾಮರ್ (64) ಗುಂಡೇಟಿಗೆ ಬಲಿಯಾಗಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು 29 ವರ್ಷದ ಗನ್‍ಮ್ಯಾನ್ ಓಮರ್ ಎನ್ರಿಕ್ ನನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

ಬೆಳಗ್ಗೆ 9.10 ಕ್ಕೆ ಬ್ಯಾಂಕಿನ ಸಿಬ್ಬಂದಿ 911 ಕರೆಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಈ ವೇಳೆ ಗನ್‍ಮ್ಯಾನ್ ಬ್ಯಾಂಕಿನಲ್ಲೇ ಇದ್ದು, ಸುಮಾರು 5 ಬಾರಿ ಗುಂಡನ್ನು ಗಾಳಿಯಲ್ಲಿ ಹಾರಿಸಿದ್ದಾನೆ. ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಆರೋಪಿಗೆ ಶರಣಾಗುವಂತೆ ಹೇಳಿದ್ದಾರೆ. ಆದರೆ ಆತ ಶರಣಾಗದ ಕಾರಣ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನ್ಯೂಯಾರ್ಕ್‍ನಲ್ಲಿನ ಭಾರತದ ರಾಯಭಾರಿ ಸಂದೀಪ್ ಚಕ್ರವರ್ತಿ ಅವರು ಪ್ರತಿಕ್ರಿಯಿಸಿ, ಮೃತಪಟ್ಟ ಪೃಥ್ವಿರಾಜ್ ಕುಟುಂಬದ ಸದಸ್ಯರು ತಮ್ಮೊಂದಿಗೆ ಸಂಪರ್ಕದಲ್ಲಿದ್ದು, ಅವರ ಮೃತದೇಹವನ್ನು ತವರಿಗೆ ಕಳುಹಿಸಲು ವ್ಯವಸ್ಥೆ ಮಾಡುವುದಾಗಿ ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *