ಜಾನುವಾರು ಸಾಗಿಸುತ್ತಿದ್ದ 25 ಜನರನ್ನು ಕಟ್ಟಿ ‘ಗೋ ಮಾತಾ ಕೀ ಜೈ’ ಹೇಳಿಸಿದ್ರು

ಭೋಪಾಲ್: ಜಾನುವಾರುಗಳನ್ನು ಸಾಗಿಸುತ್ತಿದ್ದ 25 ಜನರನ್ನು ಕಟ್ಟಿ ಗೋ ಮಾತಾ ಕೀ ಜೈ ಎಂದು ಹೇಳಿಸಿದ ಘಟನೆ ಮಧ್ಯಪ್ರದೇಶದ ಖಂಡ್ವಾ ಜಿಲ್ಲೆಯಲ್ಲಿ ನಡೆದಿದೆ.

ಮಹಾರಾಷ್ಟ್ರಕ್ಕೆ ಜಾನುವಾರುಗಳನ್ನು ಸಾಗಿಸುತ್ತಿದ್ದ 25 ಜನರನ್ನು ಖಲ್ವಾಸ್ ಪ್ರಾಂತ್ಯದ ಸಾನ್ವಲಿಖೇಡ ಗ್ರಾಮಸ್ಥರು ಭಾನುವಾರ ಹಿಡಿದಿದ್ದಾರೆ. ಬಳಿಕ ಅವರನ್ನು ಹಗ್ಗದಿಂದ ಕಟ್ಟಿದ್ದ ಗ್ರಾಮಸ್ಥರು, ಮೊಣಕಾಲೂರಿ ಕಿವಿ ಹಿಡಿದು ಕುಳಿತುಕೊಳ್ಳುವಂತೆ ಆರೋಪಿಗಳಿಗೆ ಹೇಳಿದರು. ಈ ವೇಳೆ ಅವರಿಗೆ ಥಳಿಸಿ, ಗೋ ಮಾತಾ ಕಿ ಜೈ ಎಂದು ಹೇಳುವಂತೆ ಒತ್ತಾಯಿಸಿದ್ದಾರೆ.

ಗ್ರಾಮಸ್ಥರು ಥಳಿಸಿದ್ದರಿಂದ ಹೆದರಿದ ಆರೋಪಿಗಳು ಗೋ ಮಾತಾ ಕಿ ಜೈ ಎಂದು ಹೇಳಿದ್ದಾರೆ. ಈ ದೃಶ್ಯವನ್ನು ಸ್ಥಳದಲ್ಲಿದ್ದ ಅನೇಕರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, 100ಕ್ಕೂ ಹೆಚ್ಚು ಗ್ರಾಮಸ್ಥರು ಸೇರಿ ಹಲ್ಲೆ ಮಾಡಿದ್ದಾರೆ ಎಂದು ವರದಿಯಾಗಿದೆ.

ಗ್ರಾಮಸ್ಥರು ಆರೋಪಿಗಳನ್ನು ಥಳಿಸಿದ ಬಳಿಕ 2 ಕಿ.ಮೀ ನಡೆಸಿಕೊಂಡು ಬಂದು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ 21 ವಾಹನಗಳನ್ನು ಕೂಡ ವಶಕ್ಕೆ ಪಡೆಯಲಾಗಿದೆ. ಅಷ್ಟೇ ಅಲ್ಲದೆ ಆರೋಪಿಗಳ ಮೇಲೆ ಹಲ್ಲೆ ಮಾಡಿದ ರೈತರು, ಗ್ರಾಮಸ್ಥರು ಸೇರಿದಂತೆ 100 ಜನರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಖುಲ್ವಾಸ್ ಠಾಣೆಯ ಇನ್‍ಸ್ಪೆಕ್ಟರ್ ಹರಿಶಂಕರ್ ರಾವತ್ ತಿಳಿಸಿದ್ದಾರೆ.

ಇಂತಹದ್ದೆ ಘಟನೆ ಮೇ ತಿಂಗಳಿನಲ್ಲಿ ನಡೆದಿತ್ತು. ಆಟೋದಲ್ಲಿ ಗೋ ಮಾಂಸ ಸಾಗಿಸುತ್ತಿದ್ದ ಎಂದು ಓರ್ವ ಮಹಿಳೆ ಸೇರಿದಂತೆ ಮೂವರು ಮುಸ್ಲಿಮರನ್ನು ಗುಂಪೊಂದು ಹಲ್ಲೆ ಮಾಡಿತ್ತು. ಅಷ್ಟೇ ಅಲ್ಲದೆ ಜೈ ಶ್ರೀರಾಮ್ ಹೇಳುವಂತೆ ಒತ್ತಾಯಿಸಿದ್ದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ದೇಶ ವ್ಯಾಪಿ ಭಾರೀ ಟೀಕೆ ವ್ಯಕ್ತವಾಗಿತ್ತು.

Comments

Leave a Reply

Your email address will not be published. Required fields are marked *