ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದ್ದಕ್ಕೆ 25 ಕುಟುಂಬಗಳಿಗೆ ಬಹಿಷ್ಕಾರ

ಚಾಮರಾಜನಗರ: ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಬಿಜೆಪಿ ಪರವಾಗಿ ಮತ ಹಾಕಿದ್ದಕ್ಕೆ 25 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹೇರಿರುವ ಅಮಾನವೀಯ ಘಟನೆ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮಾಲಾಪುರ ಗ್ರಾಮದ 25 ಕುಟುಂಬದ ಮತದಾರರು ಬಿಜೆಪಿಗೆ ಮತ ಚಲಾಯಿಸಿದ್ದಾರೆ ಎಂದು ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ.

ಈ ಬಹಿಷ್ಕಾರದಿಂದ ಕಂಗಾಲಗಿರುವ 25 ಕುಟುಂಬಗಳು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲು ಹೋದರೆ ಪೊಲೀಸರು ದೂರು ದಾಖಲು ಮಾಡಿಕೊಳ್ಳದೆ ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಲಾಗಿದೆ. ಹೀಗಾಗಿ ಮಾಧ್ಯಮದ ಮುಂದೆ ಅಳಲು ತೊಡಿಕೊಂಡಿರುವ ಕುಟುಂಬ ತಮಗೆ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿದ್ದಾರೆ. ಮಾಧ್ಯಮದ ಮುಂದೆ ಬಂದರು ಎಂಬ ಕಾರಣಕ್ಕೆ ಕೈ ಕಾರ್ಯಕರ್ತರು 25 ಕುಟುಂಬಗಳ ಸದಸ್ಯರ ಮೇಲೆ ಹಲ್ಲೆಗೆ ಮುಂದಾದ ಘಟನೆಯೂ ನಡೆದಿದೆ.

ಈ ಬಹಿಷ್ಕಾರದಿಂದ ಸುತ್ತಮುತ್ತ ಗ್ರಾಮಗಳಲ್ಲೂ ಈ ಕುಟುಂಬದವರಿಗೆ ಕೂಲಿ ಸಿಗುತ್ತಿಲ್ಲ ಹಾಗೂ ಇವರ ಅಂಗಡಿಗಳಲ್ಲೂ ವ್ಯಾಪಾರವಾಗುತ್ತಿಲ್ಲ. ಇದಲ್ಲದೇ ಏನೂ ಅರಿಯದ ಮಕ್ಕಳನ್ನು ಸಹ ಶಾಲೆಯಲ್ಲಿ ಹಾಗೂ ಗ್ರಾಮದಲ್ಲಿ ಅಸ್ಪೃಶ್ಯರಂತೆ ಕಾಣುತ್ತಿದ್ದಾರೆ. ಇದರಿಂದ ಈ ಕುಟುಂಬಗಳು ಪ್ರತಿ ನಿತ್ಯವೂ ಕಣ್ಣೀರಿನಿಂದ ಕೈತೊಳೆಯುವಂತಾಗಿದೆ.

ಈ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿದ ನಂತರ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಬೊಮ್ಮಲಾಪುರದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಕಾಂಗ್ರೆಸ್ ಕಾರ್ಯಕರ್ತರು ಬಹಿಷ್ಕಾರ ಹಾಕಿದ್ದಾರಾ ಎಂದು ಪರಿಶೀಲಿಸಿ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸುತ್ತವೆ. ಅಧಿಕಾರಿಗಳು ವರದಿ ನೀಡಿದ ಬಳಿಕ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

 

Comments

Leave a Reply

Your email address will not be published. Required fields are marked *